ಚರಿತ್ರೆ ಒಂದು ಅಸ್ಮಿತೆಯಿಂದ ಆಳಲ್ಪಡಬಾರದು: ರೋಮಿಲಾ
ಹೊಸದಿಲ್ಲಿ, ಮಾ.7: ಜವಾಹರಲಾಲ್ ನೆಹರೂ ವಿಶ್ವವಿದ್ಯಾ ನಿಲಯದಲ್ಲಿ(ಜೆಎನ್‌ಯು) ರವಿವಾರ ಹೌಸ್‌ಫುಲ್ ಆಗಿತ್ತು. ಇತಿಹಾಸಕಾರರಾದ ರೋಮಿಲಾ ಥಾಪರ್ ಹಾಗೂ ಹರ್ಬನ್ಸ್ ಮುಖಿಯಾ ಬಹು ಚರ್ಚಿತ ರಾಷ್ಟ್ರೀಯವಾದದ ಕುರಿತು ಅಲ್ಲಿ ಉಪನ್ಯಾಸ ನೀಡಿದ್ದಾರೆ. ಆ ಬಳಿಕ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
1970ರ ನವೆಂಬರ್‌ನಲ್ಲಿ ವಿವಿ ಸೇರಿದ್ದ ತನ್ನನ್ನು ‘ಒಎಸ್‌ಯು’ ಡೈನೊಸಾರ್ಸ್‌ಗಳಲ್ಲೊಂದು’ ಎಂದು ಕರೆದುಕೊಂಡ ಥಾಪರ್, ಕ್ಯಾಂಪಸ್‌ನಲ್ಲಿ ಅಫ್ಝಲ್ ಗುರು ಪರ ಕಾರ್ಯಕ್ರಮದ ಬಳಿಕ ನಡೆದ ಘಟನೆಗಳಿಂದ ತಾನು ಭಾರೀ ಖೇದಗೊಂಡೆನೆಂದು ಹೇಳಿದರು.
ಇದು ಜೆಎನ್‌ಯುವನ್ನು ಒಡೆಯುವ ಒಂದು ಪ್ರಯತ್ನವೆಂದು ಒಪ್ಪಿಕೊಂಡ ಅವರು, ವಿಶ್ವವಿದ್ಯಾನಿಲಯವೊಂದು ಸಮಾಜದಲ್ಲಿ ಏನು ನಡೆಯುತ್ತಿದೆಯೆಂಬುದನ್ನು ವಿಮರ್ಶಾತ್ಮಕವಾಗಿ ವಿಚಾರಣೆ ನಡೆಸುವುದನ್ನು ನಿರೀಕ್ಷಿಸಲಾಗಿದೆ ಎಂದರು.
ರಾಷ್ಟ್ರ ಮತ್ತು ಇತಿಹಾಸದ ಬಗ್ಗೆ ಮಾತನಾಡಿದ ಥಾಪರ್, ರಾಷ್ಟ್ರೀಯ ಸಿದ್ಧಾಂತಕ್ಕೆ ಚರಿತ್ರೆ ಅಗತ್ಯ. ಆದರೆ, ಅದು ಜನರನ್ನು ಒಟ್ಟಾಗಿ ಬಂಧಿಸುವ ಹಂಚಿಕೆಯ ಚರಿತ್ರೆಯಾಗಿರಬೇಕು. ಅದು ಕೇವಲ ಒಂದು ಅಸ್ಮಿತೆಯ ಆಧಿಪತ್ಯವಿರುವ ಚರಿತ್ರೆಯಾಗಿರಲು ಸಾಧ್ಯವಿಲ್ಲ. ಏಕೆಂದರೆ ರಾಷ್ಟ್ರೀಯವಾದ ಕೇವಲ ಒಂದು ಅಸ್ಮಿತೆಯಲ್ಲಿ ಇರುವುದಿಲ್ಲ. ಅದು ಎಲ್ಲರನ್ನೂ ಒಳಗೊಂಡಿರುತ್ತದೆಂದು ಹೇಳಿದರು.
ಆರ್ಯ ಜನಾಂಗದ ಹುಡುಕಾಟ ನಡೆಸಿದ ಅವರು, ಇದೊಂದು ಹೆಚ್ಚಿನ ಹಿಂದುತ್ವ ಸಿದ್ಧಾಂತ ಸುತ್ತುವರಿದಿರುವ ತತ್ತ್ವವಾಗಿದೆ. ವಸಾಹತು ವಿರೋಧಿ ರಾಷ್ಟ್ರೀಯತೆಯ ಆಚೆಗೆ ಜಾತ್ಯತೀತತೆಯನ್ನು ಹಾಗೂ ಎಲ್ಲರನ್ನೂ ಒಳಗೊಂಡಿತ್ತು. ಹಿಂದೂ ಹಾಗೂ ಮುಸ್ಲಿಮರಿಬ್ಬರೂ, ಎರಡು ಪ್ರತ್ಯೇಕ ರಾಷ್ಟ್ರಗಳನ್ನು ಸ್ಥಾಪಿಸುವ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ್ದರೆಂದು ಥಾಪರ್ ತಿಳಿಸಿದರು.
ವಸಾಹತು ವಿರೋಧಿಗಳಂತಲ್ಲದೆ, ಈ ಕೋಮುವಾದಿ ಸಿದ್ಧಾಂತಗಳು ತಮ್ಮ ಸ್ವ ಮತೀಯರ ಹೊರತಾಗಿ ಪ್ರತಿಯೊಬ್ಬನನ್ನೂ ಹೊರಗಿಟ್ಟಿದ್ದವು. ಅವರು ವಸಾಹತು ವಿರೋಧಿಗಳಾಗಿರದೆ, ಕೇವಲ ಪರಸ್ಪರ ವಿರೋಧಿಗಳಾಗಿದ್ದರು. ಮುಸ್ಲಿಮ್ ಲೀಗ್ ಹಾಗೂ ಹಿಂದೂ ಮಹಾಸಭಾ ಅಂತಹ 2 ಸಂಘಟನೆಗಳಾಗಿದ್ದವು. ಹಿಂದೂ ಮಹಾಸಭಾದ ಮೇಲೆ ಕ್ರಮೇಣ, ಹಿಂದುತ್ವ ಸಿದ್ಧಾಂತ ಹೊಂದಿದ್ದ ಆರೆಸ್ಸೆಸ್ ಹಾಗೂ ಅಂತಹ ಅನೇಕ ಸಂಘಟನೆಗಳು ಮೇಲುಗೈ ಸಾಧಿಸಿದವೆಂದು ಅವರು ಹೇಳಿದರು. ವಿದ್ಯಾರ್ಥಿಗಳು ಅವರ ಚಿಂತನೆಯಿಂದ ಪ್ರಭಾವಿತರಾದಂತಿತ್ತು. ಲಘು ಧಾಟಿಯಲ್ಲಿ ಉಪನ್ಯಾಸ ಆರಂಭಿಸಿದ ಮುಖಿಯಾ, ಸ್ಥಾಪಿತ ಸತ್ಯವನ್ನು ಪ್ರಶ್ನಿಸಬಲ್ಲ ವಿದ್ಯಾರ್ಥಿಗಳನ್ನು ಉತ್ಪಾದಿಸುವ ಗುರಿಯೊಂದಿಗೆ ಹಲವು ದಶಕಗಳ ಹಿಂದೆಯೇ ಜೆಎನ್‌ಯು ಸ್ಥಾಪನೆಯಾಗಿದೆ. ಆದುದರಿಂದ ಇಲ್ಲಿ ಚರ್ಚೆ ನಡೆಸುವುದೆಂದರೆ ವೃದ್ಧಾಪ್ಯ ವಿರೋಧಿ ಚಿಕಿತ್ಸೆಯಂತೆ ಎಂದರು.
ವಿಷಯವನ್ನು ‘ಮೂಲ ಭೂತಗೊಳಿಸುವ’ ಅಭ್ಯಾಸದ ವಿರುದ್ಧ ಎಚ್ಚರಿಸಿದ ಅವರು, ನಾವು ಕನ್ಹಯ್ಯಾಕುಮಾರ್‌ನ ಬಗ್ಗೆ ಮಾತನಾಡುವಾಗಲೆಲ್ಲ ಎಲ್ಲಕ್ಕಿಂತ ಹೆಚ್ಚಾಗಿ ಆತನನ್ನು ಒಬ್ಬ ಹಿಂದೂ ಹುಡುಗ ಎಂದು ಸೀಮಿತಗೊಳಿಸಲು ಪ್ರಯತ್ನಿಸುತ್ತೇವೆ. ಉಮರ್ ಖಾಲಿದ್ ಬೆಟ್ಟದ ಮೇಲೆ ನಿಂತು ತಾನು ನಾಸ್ತಿಕನೆಂದು ಸಾರಿ ಹೇಳುತ್ತಿದ್ದರೂ, ಹೆಸರಿನ ಕಾರಣದಿಂದಾಗಿ ಅವನ ಮೈಮೇಲಿರುವ ಪ್ರತಿ ಮಚ್ಚೆಯೂ ಮುಸ್ಲಿಮ್ ಆಗಿದೆಯೆಂದು ಜೋಡಿಸುತ್ತೇವೆ ಎಂದರು.
ಬಳಿಕ ಮಾತನಾಡಿದ ತೀಸ್ತಾ, ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಜೆಎನ್‌ಯು ಒಂದು ‘ಆಶಾಕಿರಣವಾಗಿದೆ’. ಆರೆಸ್ಸೆಸ್ ಹಾಗೂ ಬಲಪಂಥೀಯ ಕಾರ್ಯಸೂಚಿಯನ್ನು ಸೋಲಿಸಲು ಮೈತ್ರಿಕೂಟವೊಂದನ್ನು ರಚಿಸಬೇಕೆಂದು ಕರೆ ನೀಡಿದರು.