×
Ad

ಕನ್ಹಯ್ಯ ಹತ್ಯೆಗೆ 11 ಲಕ್ಷ ಘೋಷಿಸಿದಾತನ ಖಾತೆಯಲ್ಲಿ ಇರುವುದು ಕೇವಲ 150 ರೂ.!

Update: 2016-03-07 23:42 IST

ಕನ್ಹಯ್ಯ ಕುಮಾರ್ ಹತ್ಯೆಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾನನ್ನು ದಿಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದು ಆತನ ವಿರುದ್ಧ ಕ್ರಿಮಿನಲ್ ಬೆದರಿಕೆ ಹಾಗೂ ಫೋರ್ಜರಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹೊಸದಿಲ್ಲಿ,ಮಾ.7: ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮಾರ್ ನನ್ನು ಗುಂಡಿಕ್ಕಿ ಸಾಯಿಸಿದವರಿಗೆ ರೂ. 11 ಲಕ್ಷ ನಗದು ಬಹುಮಾನ ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾನ ಬ್ಯಾಂಕ್ ಖಾತೆಯಲ್ಲಿ ಕೇವಲ ರೂ. 150 ಇರುವುದಾಗಿ ತಿಳಿದು ಬಂದಿದೆಯೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಆತನ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರಿಗೆ ಆತ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿರುವುದಾಗಿ ಹಾಗೂ ಹಲವು ತಿಂಗಳುಗಳ ಬಾಡಿಗೆ ಬಾಕಿಯಿರಿಸಿದ್ದನೆಂದು ತಿಳಿದು ಬಂದಿದೆ.
ಕನ್ಹಯ್ಯನನ್ನು ಸಾಯಿಸುವವರಿಗೆ ರೂ.11 ಲಕ್ಷ ಕೊಡುವುದಾಗಿ ಘೋಷಿಸುವ ಕರಪತ್ರಗಳನ್ನು ನಗರದ ಕೆಲವು ಕಡೆ ಅಂಟಿಸಿದ ಆರೋಪದ ಮೇಲೆ ದಿಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸುತ್ತಲೇ ಶರ್ಮಾ ಭೂಗತನಾಗಿದ್ದಾನೆ. ಆತನ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದ್ದು ಕುಟುಂಬ ಸದಸ್ಯರು, ಸಂಬಂಧಿಗಳು ಹಾಗೂ ಸ್ನೇಹಿತರ ಸಂಪರ್ಕಕ್ಕೂ ಆತ ಸಿಗುತ್ತಿಲ್ಲ.

ಶರ್ಮಾ ಬಿಹಾರದ ಬೇಗುಸರಾಯ್ ನಿವಾಸಿಯಾಗಿದ್ದು ,ದಿಲ್ಲಿ ಪೊಲೀಸರು ಆತನ ಊರಿಗೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದಾರೆ.
ರವಿವಾರ ದಿಲ್ಲಿ ಪೊಲೀಸರ ತಂಡವೊಂದು ಆತನ ಬಾಡಿಗೆ ಮನೆಯಿರುವ ರೋಹಿಣಿ ಪ್ರದೇಶಕ್ಕೆ ತೆರಳಿದ್ದಾಗ ಆತನ ಮನೆ ಮಾಲಕ ಹಾಗೂ ಕೆಲವು ನೆರೆಹೊರೆಯವರು ಶರ್ಮಾ ತಾನು ಪ್ರಭಾವಿ ವ್ಯಕ್ತಿಹಾಗೂ ಬಲಪಂಥೀಯ ಉನ್ನತ ನಾಯಕರ ಸಂಪರ್ಕ ತನಗಿದೆಯೆಂದು ಬೊಗಳೆ ಬಿಡುತ್ತಿದ್ದನೆಂಬ ಮಾಹಿತಿ ನೀಡಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ಶನಿವಾರ ಸಂಪರ್ಕಿಸಿದ್ದಾಗ ‘‘ದೇಶದ್ರೋಹಿ ಸಾಯಬೇಕೆಂಬುದು ನಮ್ಮ ಬಯಕೆ. ಆತ ದೇಶವಿರೋಧಿ ಘೋಷಣೆ ಮಾಡಿ ಭಾರತ ಮಾತೆಯನ್ನು ಅವಮಾನಿಸಿದ್ದಾನೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಆದರೆ ನ್ಯಾಯ ದೊರೆಯಲು ಬಹಳಷ್ಟು ಸಮಯ ಕಾಯಬೇಕು. ನಮಗೆ ಶೀಘ್ರ ನಿರ್ಧಾರ ಬೇಕು,’’ಎಂದಿದ್ದ.
ಕನ್ಹಯ್ಯನ ಮನೆ ಬೇಗುಸರಾಯ್‌ನಲ್ಲಿ ತನ್ನ ಮನೆಗಿಂತ ಕೇವಲ 10 ಕಿ.ಮೀ. ದೂರದಲ್ಲಿದೆಯೆಂದು ಶರ್ಮಾ ಹೇಳಿಕೊಂಡಿದ್ದ. ‘‘ನಮ್ಮ ನಾಡು ಇಂತಹ ದೇಶ ದ್ರೋಹಿಗಳಿಗೆ ಜನ್ಮ ನೀಡುವುದಿಲ್ಲ. ಆದುದರಿಂದ ನಾನು ಹೀಗೆ ಮಾಡ ಬಯಸಿದೆ,’’ಎಂದೂ ಹೇಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News