ಮುಸ್ಲಿಮ್ ವೈಯಕ್ತಿಕ ಕಾನೂನು ಬಹುಪತಿತ್ವಕ್ಕೆ ಏಕೆ ಅವಕಾಶ ನೀಡಿಲ್ಲ?: ಕೇರಳ ಜಡ್ಜ್ ಪ್ರಶ್ನೆ
ತಿರುವನಂತಪುರಂ, ಮಾ.7: ಕೇರಳದ ಹೈಕೋರ್ಟ್‌ನ್ಯಾಯಾಧೀಶರೊಬ್ಬರು ಎತ್ತಿದ ಪ್ರಶ್ನೆಯೊಂದು ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆಂಬ ಕುತೂಹಲವೇ? ‘‘ಮುಸ್ಲಿಮ್ ವೈಯಕ್ತಿಕ ಕಾನೂನು ಪುರುಷರಿಗೆ ನಾಲ್ಕು ಪತ್ನಿಯರನ್ನು ಹೊಂದಲು ಅವಕಾಶ ನೀಡುವಾಗ ಮಹಿಳೆಯರೇಕೆ ನಾಲ್ಕು ಗಂಡಂದಿರನ್ನು ಹೊಂದಬಾರದು?’’ ಎಂಬುದೇ ಅವರ ಪ್ರಶ್ನೆಯಾಗಿದೆ.
ಕೊಝಿಕ್ಕೋಡಿನಲ್ಲಿ ರವಿವಾರ ಮಹಿಳಾ ವಕೀಲರು ನಡೆಸುವ ಎನ್‌ಜಿಒ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದ ಜಸ್ಟಿಸ್.ಬಿ.ಕಮಲ್ ಪಾಶಾರ ಪ್ರಕಾರ ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಯರಿಗೆ ವಿರೋಧವಾಗಿ ಅನೇಕ ಅಂಶಗಳಿವೆ. ಸಮುದಾಯದಲ್ಲಿ ಪುರುಷರ ಪ್ರಾಬಲ್ಯವನ್ನು ಪ್ರತಿಪಾದಿಸಿರುವುದಕ್ಕೆ ಇಸ್ಲಾಮ್‌ಧಾರ್ಮಿಕ ಮುಖಂಡರನ್ನು ದೂರಿದ ಅವರು ಧಾರ್ಮಿಕ ಪ್ರವಚನಗಳ ಸಂದರ್ಭ ಇಂತಹ ಸೂಕ್ಷ್ಮ ವಿಚಾರಗಳನ್ನು ಅವಲೋಕಿಸಬೇಕೆಂದು ಹೇಳಿದರು.
‘‘ಏಕಪಕ್ಷೀಯ ತೀರ್ಪುಗಳನ್ನು ನೀಡಲು ತಾವು ಅರ್ಹರೇ ಎಂಬುದನ್ನು ಧಾರ್ಮಿಕ ನಾಯಕರು ಆತ್ಮಾವಲೋಕನ ನಡೆಸಬೇಕು ಹಾಗೂ ಇಂತ ತೀರ್ಪು ನೀಡುವವರಅರ್ಹತೆಯ ಬಗ್ಗೆ ಜನರೂ ಯೋಚಿಸಬೇಕು,’’ ಎಂದು ಹೇಳಿದ ಪಾಶಾ ಕುರ್‌ಆನ್ ನಮೂದಿಸಲಾದ ಕೆಲವೊಂದು ಹಕ್ಕುಗಳನ್ನೂ ಮಹಿಳೆಯರಿಗೆ ನಿರಾಕರಿಸಲಾಗಿದೆಯೆಂದರು.
ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುವುದು ತಪ್ಪಾಗುತ್ತದೆಯೆಂದು ಕೂಡ ಹೇಳಿದ ಪಾಶಾ ಅತ್ಯುನ್ನತ ನ್ಯಾಯಾಲಯ ಕೂಡ ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಹಿಂದೆ ಮುಂದೆ ನೋಡುತ್ತಿದೆ. ಮಹಿಳೆಯರೇ ಅನ್ಯಾಯವನ್ನು ಕೊನೆಗಾಣಿಸಲು ಮುಂದೆ ಬರಬೇಕು,’’ಎಂದು ಹೇಳಿದರು.