ಅಮಾಯಕರಿಂದ ಹೆರಾಯಿನ್ ಸರಬರಾಜು: ಕಾಸರಗೋಡು ವ್ಯಕ್ತಿ ಸಹಿತ ಮೂವರು ಕೇರಳೀಯರಿಗೆ ಕುವೈಟ್‌ನಲ್ಲಿ ಗಲ್ಲು ಶಿಕ್ಷೆ!
ನೆಡುಂಬಶ್ಶೇರಿ, ಮಾ.8: ಜೋಕೆ ನೀವು ವಿದೇಶಕ್ಕೆ ತೆರಳುವಾಗ ಈ ಕಟ್ಟನ್ನು ಅಲ್ಲಿ ಮಿತ್ರನಿಗೋ ಸಂಬಂಧಿಕರಿಗೋ ತಲುಪಿಸಿ ಎಂದು ಕೊಟ್ಟರೆ ಸಂಪೂರ್ಣ ಪರಿಶೀಲಿಸದೆ ತೆಗೆದುಕೊಳ್ಳಬೇಡಿ. ಕಟ್ಟಿನೊಳಗೆ ಮಾದಕ ವಸ್ತು ಇಟ್ಟು ನಿಮ್ಮ ಜೀವದೊಂದಿಗೆ ಚದುರಂಗಾಟ ನಡೆಸುವ ಜನರಿದ್ದಾರೆ.
ಇಂತಹ ಅಮಾಯಕರನ್ನು ಬಳಸಿ ಹಣ ಮಾಡುವ ದಂಧೆಗಿಳಿದ ಲಾಬಿ ಕೇರಳದಲ್ಲಿ ಸಕ್ರಿಯವಾಗಿದೆ.
ಕೇರಳ ಅಬಕಾರಿ ಇಲಾಖೆ ಕುವೈಟ್‌ಗೆ ಮಾದಕ ವಸ್ತು ಸರಬರಾಜು ನಡೆಸುವ ಲಾಬಿಯ ಪ್ರಮುಖರನ್ನು ಬಂಧಿಸಬೇಕಿದ್ದರೆ ಎನ್‌ಐಎಎಯಂತಹ ಏಜೆನ್ಸಿಗಳಿಂದ ತನಿಖೆಯಾಗಬೇಕೆಂದು ಒತ್ತಾಯಿಸಿದೆ. ಕುವೈಟ್‌ಗೆ ಹೋಗುವ ಭಾರತೀಯರ ಲಗೇಜ್‌ಗಳನ್ನು ಕಟ್ಟುನಿಟ್ಟಿನಿಂದ ತಪಾಸಣೆ ನಡೆಸಲಾಗುತ್ತದೆ. ವಿಮಾನ ನಿಲ್ದಾಣದ ಅಧಿಕಾರಿಗಳು ವೈದ್ಯರ ಸ್ಪಷ್ಟ ಶಿಫಾರಸಿಲ್ಲದೆ ಔಷಧಗಳನ್ನು ಕೂಡ ಒಯ್ಯಲು ಸಮ್ಮತಿಸುವುದಿಲ್ಲ.
ಕಳೆದ ದಿವಸ ಮಾದಕ ವಸ್ತು ಸರಬರಾಜು ಮಾಡಿದ್ದ ಪ್ರಕರಣದಲ್ಲಿ ಕೇರಳದ ಮೂವರಿಗೆ ಕುವೈಟ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಇವರಲ್ಲಿ ಒಬ್ಬರಾದ ಕಾಸರಗೋಡಿನ ಅಬೂಬಕರ್ ಸಿದ್ದೀಕ್‌ರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದು, ಆಲುವಾದ ಮಾದಕವಸ್ತು ಲಾಬಿಯೆನ್ನಲಾಗಿದೆ.
ಆಲುವಾದ ವೆಳ್ಳಪಳ್ಳಿಯ ಮುಹಮ್ಮದ್ ಹಾರಿಸ್, ತೊಟ್ಟುಂಮುಗಂನ ಆಬಿಕ್ ಇವರಿಬ್ಬರು ಅಬೂಬಕರ್ ಸಿದ್ದೀಕ್ ಕೈಯಲ್ಲಿ ಮಾದಕ ವಸ್ತುಗಳನ್ನು ನೀಡಿ ಕುವೈಟ್‌ನಲ್ಲಿ ಕೆಲಸ ಕೊಡಿಸುವ ಭರವಸೆ ಕೊಟ್ಟು ಕುವೈಟ್‌ಗೆ ಕಳುಹಿಸಿದ್ದರು. ಬಟ್ಟೆಯ ಕಟ್ಟೊಂದನ್ನು ಅಲ್ಲಿ ನಮ್ಮ ಗೆಳೆಯನಿಗೆ ಕೊಡಬೇಕೆಂದು ಹೇಳಿ ಅಬೂಬಕರ್ ಕೈಯಲ್ಲಿ ಕೊಟ್ಟು ಕಳುಹಿಸಿದ್ದರು.
ಬಟ್ಟೆಯ ಕಟ್ಟಿನಲ್ಲಿ ಹೆರಾಯಿನ್ ಅನ್ನು ಅವಿತಿರಿಸಲಾಗಿತ್ತು. ಕುವೈಟ್‌ಗೆ ತಲುಪಿದ ಮೇಲೆ ಅಬೂಬಕರ್ ಸಿದ್ದೀಕ್ ಸೆರೆಯಾಗಿದ್ದ. ಕೋರ್ಟ್ ಆತನಿಗೆ ಗಲ್ಲು ಶಿಕ್ಷೆಯನ್ನೂ ಘೋಷಿಸಿದೆ. ಆತ ತನ್ನನ್ನು ಬಿಡಿಸಬೇಕೆಂದು ಎಷ್ಟೇ ಕೇಳಿಕೊಂಡರು ಮಾದಕ ವಸ್ತು ಲಾಬಿ ನಿರ್ಲಕ್ಷಿಸಿತ್ತು.
ಈ ರೀತಿ ಹಲವರನ್ನು ಹೆರಾಯಿನ್ ಸರಬರಾಜಿಗೆ ಈ ಲಾಬಿ ಬಳಸಿಕೊಂಡಿತ್ತು. ಅಂತಿಮವಾಗಿ ಈ ಲಾಬಿಯೊಳಗೆ ಭಿನ್ನಮತವುಂಟಾದಾಗ ಅವರಲ್ಲಿ ಕೆಲವರನ್ನು ಅಬಕಾರಿ ಪೊಲೀಸರು ಬಂಧಿಸಿದ್ದರು. ಹಾರಿಸ್ ಪೊಲೀಸರ ಕೈಗೆ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆಬಿಕ್ ಬಂಧಿಸಲ್ಪಟ್ಟರೂ ಈಗ ಜಾಮೀನು ಪಡೆದು ಹೊರಗೆ ಬಂದಿದ್ದಾನೆ.
ಅಫಘಾನಿಸ್ತಾನದಿಂದ ಪಂಜಾಬ್ ಮೂಲಕ ಕಾಶ್ಮೀರಿ ಗಡಿ ಮೂಲಕವೂ ಹೆರಾಯಿನ್‌ನ್ನು ಕೇರಳಕ್ಕೆ ತರಲಾಗುತ್ತದೆ. ಕೆಲವು ಭಯೋತ್ಪಾದಕ ಸಂಘಟನೆಗಳು ಇದನ್ನು ಸರಬರಾಜು ಮಾಡುತ್ತವೆ. ಕುವೈಟ್‌ನಲ್ಲಿ ಒಂದು ಕಿಲೋ ಹೆರಾಯಿನ್‌ಗೆ ಒಂದು ಕೋಟಿ ರೂ. ಬೆಲೆಯಿದೆ. ಕುವೈಟ್‌ನಲ್ಲಿರುವ ಸಂಬಂಧಿಸಿದ ವ್ಯಕ್ತಿಗಳಿಗೆ ಆಲುವಾದ ಮಯಪ್ಪಾಡಿಯ ವ್ಯಕ್ತಿಯೊಬ್ಬ ತಲುಪಿಸುವ ಕೆಲಸದಲ್ಲಿ ಸಕ್ರಿಯನಾಗಿದ್ದಾನೆ. ಈತ ಕಳೆದ ಇಪ್ಪತ್ತೈದು ವರ್ಷಗಳಿಂದ ಕುವೈಟ್‌ನಲ್ಲಿಯೇ ಇದ್ದಾನೆಂದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿತ್ತು. ಈತನ ನಿಕಟಬಂಧುವೊಬ್ಬ ಹಲವರನ್ನು ಬಳಸಿ ಕೇರಳದ ಮೂಲಕ ಹೆರಾಯಿನ್‌ನ್ನು ಕುವೈಟ್‌ಗೆ ಕಳುಹಿಸುವ ಕೆಲಸದಲ್ಲಿ ನಿರತನಾಗಿದ್ದಾನೆ.
ಮಾದಕವಸ್ತುಗಳ ಗುರುತಿಸುವ ನಾಯಿಗಳಿದ್ದರೂ ಹಲವು ಸಲ ಅವುಗಳಿಗೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಕೇರಳದ ವಿಮಾನ ನಿಲ್ದಾಣಗಳಲ್ಲಿ ಕೇಂದ್ರ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೊ ವಿಶೇಷ ನಿಗಾ ವಿರಿಸತೊಡಗಿದ ನಂತರ ಇವರು ಹೊರ ರಾಜ್ಯಗಳ ವಿಮಾನ ನಿಲ್ದಾಣಗಳನ್ನು ಬಳಸತೊಡಗಿದ್ದಾರೆ.
ಇದೇ ಲಾಬಿಯಲ್ಲಿ ಹಲವು ಮಹಿಳೆಯರೂ ಇದ್ದಾರೆ. ಪಾಲಕ್ಕಾಡ್‌ನ ಮುಸ್ತಫಾ ಶಾಹುಲ್ ಹಮೀದ್ (40) ಕಾಸರಗೋಡಿನ ಅಬೂಬಕರ್ ಸಿದ್ದೀಖ್ (21) ಮಲಪ್ಪುರಂನ ಫೈಝಲ್ (33) ಗೆ ಕುವೈಟ್ ನ್ಯಾಯಾಲಯದಿಂದ ಕಳೆದ ದಿವಸ ಗಲ್ಲು ಶಿಕ್ಷೆ ತೀರ್ಪು ಹೊರಬಿದ್ದಿದೆ. ಜೊತೆಗೆ ಶ್ರೀಲಂಕಾದ ಮಹಿಳೆಯೊಬ್ಬಳಿಗೂ ಗಲ್ಲು ಶಿಕ್ಷೆ ತೀರ್ಪು ನೀಡಲಾಗಿದೆ.
ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಇವರು ಬಂಧಿಸಲ್ಪಟ್ಟಿದ್ದರು. ತಾಯ್ನಿಡಿನಿಂದ ಮಾದಕ ವಸ್ತುಗಳನ್ನು ತಂದಿದ್ದಾರೆಂದು ಇವರ ಮೇಲೆ ಆರೋಪ ಹೊರಿಸಲಾಗಿತ್ತು. ಆರೋಪಿಗಳನ್ನು ಮಾದಕವಸ್ತು ಸಹಿತ ವಾಸಸ್ಥಳದಿಂದ ಕುವೈಟ್ ಪೊಲೀಸರು ಬಂಧಿಸಿದ್ದರು.
ಈತನ ಫೋನ್ ದಾಖಲೆಯನ್ನು ಪರಿಶೀಲಿಸಿ ಇನ್ನುಳಿದ ಇಬ್ಬರನ್ನೂ ಬಂಧಿಸಲಾಗಿತ್ತು. ಇವರಲ್ಲಿ ವಿಮಾನ ನಿಲ್ದಾಣದಿಂದ ಕರೆ ತಂದ ಟ್ಯಾಕ್ಸಿ ಚಾಲಕನೂ ಇದ್ದಾನೆ. ಅಪರಾಧಿಗಳಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಸಮಯವನ್ನು ನೀಡಲಾಗಿದೆ.