×
Ad

ಅಸಲಿ ಆರೋಪಿಯ ಬದಲು ಬೇರೊಬ್ಬನನ್ನು ಹಿಡಿದು ಜೈಲಿಗೆ ಕಳುಹಿಸಿದ ಉತ್ತರ ಪ್ರದೇಶ ಪೊಲೀಸರು!

Update: 2016-03-08 15:58 IST

ಮೀರತ್, ಮಾ. 8: ಉತ್ತರ ಪ್ರದೇಶದ ಪೊಲೀಸರು ವಿವಾದದಿಂದ ಮುಕ್ತರಾಗುವಂತೆ ಕಾಣುತ್ತಿಲ್ಲ.

ಈ ಖಾಕಿ ಮಂದಿ ಮತ್ತೊಮ್ಮೆ ತಮ್ಮ ಚಾಲಕಿ ಪ್ರದರ್ಶಿಸಿ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣದ ನೈಜ ಆರೋಪಿ ಪೊಲೀಸ್ ಠಾಣೆಯಿಂದ  ಓಡಿ ಹೋದಾಗ ಪೊಲೀಸರು ಇನ್ನೊಬ್ಬನನ್ನು ಹಿಡಿದು ತಂದು ಆರೋಪಿಯ ಬದಲಾಗಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

ಉತ್ತರ ಪ್ರದೇಶದ ಮೀರತ್‌ನ ಟಿಪಿ ನಗರ ಠಾಣೆಯ ಪೊಲೀಸರು ಮತ್ತು ಕೆಲವರ ನಡುವೆ ಘರ್ಷಣೆಯಾಗಿತ್ತು. ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ವಿಕಾಸ್ ಎಂಬಾತ ಠಾಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಪೊಲೀಸರು ತಮಗೆ ಕುತ್ತಾಗುವುದನ್ನು ತಪ್ಪಿಸಲಿಕ್ಕಾಗಿ ಅಮಾಯಕ ವ್ಯಕ್ತಿಯೊಬ್ಬನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಎಸಿಪಿ ಬಾಗಪತ್‌ರ ತನಿಖಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಟಿಪಿ ನಗರ ಎಸ್ಸೈ ಕಾರಣರಾಗಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವರದಿಯಲ್ಲಿ ಎಸಿಪಿ ಸೂಚಿಸಿದ್ದಾರೆ. ತನಿಖಾ ವರದಿ ಪ್ರಕಾರ ಸಮಾಜವಾದಿ ಪಕ್ಷದ ಮಹಿಳಾ ಸಭಾದ ಜಿಲ್ಲಾಧ್ಯಕ್ಷೆ ಸಂಗೀತಾ ರಾಹುಲ್‌ರ ಪುತ್ರ ನಿತಿನ್ ಮತ್ತು ಅವನ ಗೆಳೆಯ ವಿಕಾಸ್‌ ನನ್ನು ಟಿಪಿ ನಗರ ಪೊಲೀಸರು ಬಂಧಿಸಿದ್ದರು.

ಸಂಗೀತಾ ರಾಹುಲ್ ತಮ್ಮ ಕಾರ್ಯಕರ್ತರೊಂದಿಗೆ ಠಾಣೆಗೆ ಹೋದಾಗ ಪೊಲೀಸರೊಂದಿಗೆ ಸಂಘರ್ಷ ಸ್ಥಿತಿ ನಿರ್ಮಾಣವಾಗಿತ್ತು. ಇನ್ಸ್ ಪೆಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಆರೋಪದಲ್ಲಿ ಸಂಗೀತಾ, ನಿತಿನ್ ಮತ್ತು ವಿಕಾಸ್‌ರನ್ನು ಬಂಧಿಸಲಾಗಿತ್ತು. ತಡರಾತ್ರಿ ಪ್ರಕರಣ ಶಾಂತವಾದಾಗ ಆರೋಪಿ ವಿಕಾಸ್ ಠಾಣೆಯಿಂದ ಪರಾರಿಯಾಗಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News