×
Ad

89 ಲಕ್ಷ ಮಕ್ಕಳು ಲಸಿಕೆ ವಂಚಿತರು

Update: 2016-03-08 23:43 IST

ಹೊಸದಿಲ್ಲಿ, ಮಾ.8: ಭಾರತದಲ್ಲಿ ಸುಮಾರು 89 ಲಕ್ಷ ಮಕ್ಕಳು ರೋಗನಿರೋಧಕ ಲಸಿಕೆಯನ್ನು ಭಾಗಶಃ ಪಡೆದಿದ್ದಾರೆ ಅಥವಾ ಯಾವುದೇ ಲಸಿಕೆಯನ್ನು ಪಡೆದಿಲ್ಲವೆಂದು ಕೇಂದ್ರ ಸರಕಾರವು ಮಂಗಳವಾರ ಒಪ್ಪಿಕೊಂಡಿದೆ. ಆದಾಗ್ಯೂ, ಕಳೆದೊಂದು ವರ್ಷದಲ್ಲಿ ರೋಗನಿರೋಧಕ ಲಸಿಕೆಯನ್ನು ಪಡೆದಿರುವ ಮಕ್ಕಳ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ ಎಂದು ಅದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸುತ್ತಾ ‘‘ಮಕ್ಕಳ ಕುರಿತ ಕ್ಷಿಪ್ರ ಸಮೀಕ್ಷೆ-2013ರಲ್ಲಿ ಲಭ್ಯವಾದ ಅಂಕಿಸಂಖ್ಯೆಯ ವಿವರಗಳನ್ನು ಸದನದ ಮುಂದಿಟ್ಟರು. , ದೇಶದ ಸುಮಾರು 89 ಲಕ್ಷ ಮಂದಿ ಮಕ್ಕಳ ಪೈಕಿ 17 ಲಕ್ಷ ಮಕ್ಕಳು ರೋಗನಿರೋಧಕ ಲಸಿಕೆ ಪಡೆದಿಲ್ಲ ಹಾಗೂ 72 ಲಕ್ಷ ಮಕ್ಕಳು ಭಾಗಶಃ ಪಡೆದುಕೊಂಡಿದ್ದಾರೆ’’ ಎಂದು ತಿಳಿಸಿದರು.
ಮಕ್ಕಳಿಗೆ ಲಸಿಕೆ ನೀಡುವುದರ ಪ್ರಯೋಜನಗಳ ಬಗ್ಗೆ ಪೋಷಕರಿಗೆ ಅರಿವಿನ ಕೊರತೆ ಹಾಗೂ ಲಸಿಕೆ ಹಾಕುವುದರಿಂದ ಅಡ್ಡಪರಿಣಾಮಗಳು ಉಂಟಾಗುವುದೆಂಬ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣವೆಂದು ಅವರು ಹೇಳಿದರು. 2015ರ ಜುಲೈನಲ್ಲಿ ಕೇಂದ್ರ ಸರಕಾರವು ‘ಮಿಶನ್ ಇಂದ್ರಧನುಷ್ ಲಸಿಕೆ ಅಭಿಯಾನ ಆರಂಭಿಸಿದ ಬಳಿಕ ಮಕ್ಕಳ ಲಸಿಕೆ ನೀಡಿಕೆಯ ಪ್ರಮಾಣದಲ್ಲಿ ಶೇ.5ರಷ್ಟು ಹೆಚ್ಚಳವಾಗಿದೆಯೆಂದು ನಡ್ಡಾ ತಿಳಿಸಿದ್ದಾರೆ.
     ಎರಡನೆ ಹಂತದ ಲಸಿಕೆ ಅಭಿಯಾನವನ್ನು 2015ರ ಅಕ್ಟೋಬರ್‌ನಿಂದ ಜನವರಿ 2016ರವರೆಗೆ ನಡೆಸಲಾಗಿದ್ದು, ಫೆಬ್ರವರಿ 15ರ ವೇಳೆಗೆ 1.42 ಕೋಟಿ ಮಕ್ಕಳನ್ನು ತಲುಪುವಲ್ಲಿ ಸರಕಾರ ಸಫಲವಾಗಿದೆ. ಈ ಪೈಕಿ 37 ಲಕ್ಷ ಮಕ್ಕಳು ಸಂಪೂರ್ಣ ಲಸಿಕೆಗೊಳಪಟ್ಟಿದ್ದಾರೆ ಹಾಗೂ 37 ಲಕ್ಷ ಗರ್ಭಿಣಿಯರಿಗೆ ಟೆಟಾನಸ್ ನಿರೋಧಕ ಲಸಿಕೆ ನೀಡಲಾಗಿದೆಯೆಂದು ನಡ್ಡಾ ತಿಳಿಸಿದರು.
 ಝಿಕಾ ವೈರಸ್ ಹಾವಳಿ ಕುರಿತ ಪ್ರಶ್ನೆಗೆ ಉತ್ತರಿದ ಸಚಿವರು, ಸದ್ಯದ ಮಟ್ಟಿಗೆ ಭಾರತದಲ್ಲಿ ಝಿಕಾ ವೈರಸ್ ನಿರೋಧಕ ಲಸಿಕೆಯನ್ನು ನೀಡುವ ಯೋಚನೆಯಿಲ್ಲವೆಂದು ಹೇಳಿದರು.
 ಲಸಿಕೆ ಅಭಿಯಾನಕ್ಕೆ ಸಂಬಂಧಿಸಿ ದೇಶಾದ್ಯಂತ 210 ಜಿಲ್ಲೆಗಳ ಮೇಲೆ ಗಮನವಿರಿಸಲಾಗಿದ್ದು, 20 ಲಕ್ಷ ಮಕ್ಕಳಿಗೆ ಹಾಗೂ 21 ಲಕ್ಷ ಮಹಿಳೆಯರಿಗೆ ಲಸಿಕೆ ನೀಡಲಾಗಿದೆಯೆಂದು ನಡ್ಡಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News