ಅರ್ನಬ್ ನನ್ನು ಜೈಲಿಗೆ ಹಾಕಬೇಕು : ವಿಜಯ್ ಮಲ್ಯ
ಲಂಡನ್ , ಮಾ. 10 : ಭಾರತೀಯ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ಸಾಲ ಬಾಕಿಯಿಟ್ಟು ದೇಶದಿಂದ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್ ಮಲ್ಯ ಲಂಡನ್ ನಿಂದ ಸರಣಿ ಟ್ವೀಟ್ ಗಳ ಮೂಲಕ ತಾನು ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ.
ನಾನು ಅಂತಾರಾಷ್ಟ್ರೀಯ ಉದ್ಯಮಿ. ಭಾರತಕ್ಕೆ ಹೋಗಿ ಬರುತ್ತಿರುತ್ತೇನೆ. ನಾನು ತಲೆಮರೆಸಿಕೊಂಡು ಭಾರತದಿಂದ ಬಂದಿಲ್ಲ. ಅಲ್ಲಿನ ಸಂಸತ್ತಿನ ಸದಸ್ಯನಾಗಿ ದೇಶದ ಕಾನೂನು ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಹಾಗು ಗೌರವವಿದೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
ಆದರೆ ತನ್ನನ್ನು ವಿಲನ್ ನಂತೆ ಚಿತ್ರಿಸಿರುವ ಭಾರತೀಯ ಮಾಧ್ಯಮಗಳ ಮಾಲಕರ ಮೇಲೆ ಹರಿಹಾಯ್ದಿರುವ ಮಲ್ಯ ಮಾಧ್ಯಮ ಮಾಲಕರು ನನ್ನಿಂದ ಪಡೆದ ಉಪಕಾರ ಹಾಗು ವಸತಿ ವ್ಯವಸ್ಥೆಯನ್ನು ನೆನಪಿಸಿಕೊಳ್ಳಲಿ. ಎಲ್ಲವೂ ದಾಖಲೆಯಲ್ಲಿದೆ. ಈಗ ಟಿ ಆರ್ ಪಿ ಗಾಗಿ ನನ್ನ ವಿರುದ್ಧ ಮಾಧ್ಯಮ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಲ್ಯ, ಟೈಮ್ಸ್ ನೌ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಮೇಲೆ ಅಕ್ಷರಶ: ಹರಿಹಾಯ್ದಿದ್ದಾರೆ. " ಟೈಮ್ಸ್ ನೌ ವಾಹಿನಿಯ ಸಂಪಾದಕ ಮಾನನಷ್ಟ, ಸಂಚು , ಸುಳ್ಳುಸುದ್ದಿ ಹಾಗು ವೈಭವೀಕರಿಸಿದ ಸುಳ್ಳುಗಳನ್ನು ಪ್ರಸಾರ ಮಾಡಿದ್ದಕ್ಕೆ ಜೈಲಿನ ಉಡುಗೆಯಲ್ಲಿ ಜೈಲಿನ ಊಟ ಮಾಡಬೇಕು " ಎಂದು ಹೇಳಿದ್ದಾರೆ.