ಆಝಾದ್‌ರ ಆರೆಸ್ಸೆಸ್-ಐಸಿಸ್ ಹೇಳಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿರುವ ಬಿಜೆಪಿ
ಹೊಸದಿಲ್ಲಿ,ಮಾ.13: ಆರೆಸ್ಸೆಸ್‌ನ್ನು ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಹೋಲಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರ ವಿವಾದಾತ್ಮಕ ಹೇಳಿಕೆಯನ್ನು ಸೋಮವಾರ ಸಂಸತ್ತಿನಲ್ಲಿ ಎತ್ತಲು ಬಿಜೆಪಿ ಸಜ್ಜಾಗಿದೆ.
ಕೆಲವು ಸದಸ್ಯರು ಸಂಸತ್ತಿನಲ್ಲಿ ಈ ವಿಷಯವನ್ನೆತ್ತಿ ಆಝಾದ್‌ರಿಂದ ಕ್ಷಮೆಯಾಚನೆಯನ್ನು ಆಗ್ರಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದವು.
ಶನಿವಾರ ಜಮೀಯತ್ ಉಲಮಾ -ಇ-ಹಿಂದ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರೆಸ್ಸೆಸ್‌ನ್ನು ಐಸಿಸ್ ಜೊತೆಗೆ ಹೋಲಿಸುವ ಮೂಲಕ ಆಝಾದ್ ವಿವಾದವನ್ನು ಹುಟ್ಟುಹಾಕಿದ್ದಾರೆ.
ಆರೆಸ್ಸೆಸ್‌ನ್ನು ವಿರೋಧಿಸುವಂತೆ ಐಸಿಸ್‌ನಂತಹ ಸಂಘಟನೆಗಳನ್ನೂ ನಾವು ವಿರೋಧಿಸುತ್ತೇವೆ. ಇಸ್ಲಾಂ ಧರ್ಮವನ್ನು ಪಾಲಿಸುವ ನಮ್ಮಲ್ಲೂ ಯಾರಾದರೂ ತಪ್ಪು ಕೆಲಸಗಳನ್ನು ಮಾಡಿದರೆ ಅವರು ಯಾವುದೇ ರೀತಿಯಲ್ಲಿಯೂ ಆರೆಸ್ಸೆಸ್‌ಗೆ ಕಡಿಮೆಯಿಲ್ಲ ಎಂದು ಅವರು ಹೇಳಿದ್ದರು. ನಾಗಪುರದಲ್ಲಿ ಆರೆಸ್ಸೆಸ್ ವಕ್ತಾರರು ಇದಕ್ಕೆ ಪ್ರತಿಕ್ರಿಯಿಸುತ್ತ,ಇಂತಹ ಹೋಲಿಕೆಯು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನವನ್ನು ಮತ್ತು ಐಸಿಸ್‌ನಂತಹ ಮೂಲಭೂತವಾದಿ ಮತ್ತು ಕ್ರೂರ ಶಕ್ತಿಗಳನ್ನು ಎದುರಿಸಲು ಅದು ಸಿದ್ಧವಿಲ್ಲ ಎನ್ನುವುದನ್ನು ತೋರಿಸುತ್ತದೆ. ಆಝಾದ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಆರೆಸ್ಸೆಸ್ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ಆರೆಸ್ಸೆಸ್ ರಾಷ್ಟ್ರವಾದಿ ಸಂಘಟನೆಯಾಗಿದೆ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿಯು ಆಝಾದ್‌ರಿಂದ ಕ್ಷಮೆಯಾಚನೆಯನ್ನು ಆಗ್ರಹಿಸಿದೆ.
ಆಝಾದ್ ಇಂತಹ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ ಎಂದಿರುವ ಅದು,ಅವರ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಅವರು ತನ್ನ ಹೇಳಿಕೆಯನ್ನು ಹಿಂದೆಗೆದುಕೊಳ್ಳದಿದ್ದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಆಗ್ರಹಿಸಿದೆ.