×
Ad

ನಿಷೇಧಿತ ಔಷಧಿಗಳ ಪಟ್ಟಿಯ ಬಹಿರಂಗಕ್ಕೆ ಕಾಂಗ್ರೆಸ್ ಸಂಸದ ಶುಕ್ಲಾ ಆಗ್ರಹ

Update: 2016-03-16 18:08 IST

ಹೊಸದಿಲ್ಲಿ,ಮಾ.16: ಸುಮಾರು 350 ನಿಗದಿತ ಪ್ರಮಾಣದ ಸಂಯೋಜಿತ ಔಷಧಿಗಳನ್ನು ಸರಕಾರವು ನಿಷೇಧಿಸಿರುವ ಹಿನ್ನೆಲೆಯಲ್ಲಿ ಇಷ್ಟೊಂದು ವರ್ಷಗಳ ಕಾಲ ಇಂತಹ ಔಷಧಿಗಳು ತಯಾರಾಗುತ್ತಿದ್ದ ಮತ್ತು ಮಾರಾಟವಾಗುತ್ತಿದ್ದ ಬಗ್ಗೆ ಬುಧವಾರ ರಾಜ್ಯಸಭೆಯಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಾಜೀವ ಶುಕ್ಲಾ ಅವರು, ಈ ಔಷಧಿಗಳ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ಅವರು,ಇದೊಂದು ಗಂಭೀರ ವಿಷಯವಾಗಿದೆ. ಸರಕಾರವು 115 ಔಷಧಿ ತಯಾರಿಕೆ ಕಂಪನಿಗಳ ವಿರುದ್ಧ ಕ್ರಮವನ್ನು ಕೈಗೊಂಡಿರುವಾಗ ಅವುಗಳ ಮತ್ತು ಔಷಧಿಗಳ ಹೆಸರುಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆಗೊಳಿಸುವುದು ಅಗತ್ಯವಾಗಿದೆ. ಹಲವಾರು ಕಂಪನಿಗಳು ನಿಯಾಮಾವಳಿಗಳನ್ನು ಉಲ್ಲಂಘಿಸಿ ಈ ಔಷಧಿಗಳನ್ನು ತಯಾರಿಸುತ್ತಿವೆ ಎಂದರು.

ಕೋರೆಕ್ಸ್ ಮತ್ತು ವಿಕ್ಸ್ ಆ್ಯಕ್ಷನ್ 500ರಂತಹ ಚಿರಪರಿಚಿತ ಔಷಧಿಗಳನ್ನು ನಿಷೇಧಿಸಲಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ಅವರು, ನಿಷೇಧಿಸಲಾಗಿರುವ ಇಂತಹ ಎಲ್ಲ ಔಷಧಿಗಳ ಹೆಸರುಗಳು ಜನರಿಗೆ ಗೊತ್ತಾಗಬೇಕು. ಇದು ಜನರ ಆರೋಗ್ಯದ ಪ್ರಶ್ನೆಯಾಗಿರುವುದರಿಂದ ಔಷಧಿ ಕಂಪನಿಗಳಿಗೆ ಪರವಾನಿಗೆಗಳನ್ನು ನೀಡುವಾಗ ಅವು ಏನನ್ನು ತಯಾರಿಸುತ್ತವೆ ಮತ್ತು ಅವುಗಳ ಕಾರ್ಯಾಚರಣೆ ಏನು ಎನ್ನುವುದನ್ನೂ ಸರಕಾರವು ಪರಿಶೀಲಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News