ನ್ಯಾಯಾಲಯಗಳು ಸಿಬಿಐ ತನಿಖೆಗೆ ಒಪ್ಪಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ: ಸರಕಾರ
Update: 2016-03-16 23:08 IST
ಹೊಸದಿಲ್ಲಿ,ಮಾ.16: ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಸಿಬಿಐ ತನಿಖೆಗೆ ಒಪ್ಪಿಸುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸರಕಾರವು ಬುಧವಾರ ಲೋಕಸಭೆಯಲ್ಲಿ ತಿಳಿಸಿತು. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಒಟ್ಟು 292 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿವೆ. ಹಿಂದಿನ ವರ್ಷ ಇವುಗಳ ಸಂಖ್ಯೆ 175ರಷ್ಟಿತ್ತು ಎಂದು ಸಹಾಯಕ ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ವಿವಿಧ ರಾಜ್ಯ ಸರಕಾರಗಳು ಕಳೆದ ವರ್ಷ 34 ಪ್ರಕರಣ ಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರೆ,2014ರಲ್ಲಿ ಇವುಗಳ ಸಂಖ್ಯೆ 32 ಆಗಿತ್ತು ಎಂದರು. ಈ ವರ್ಷದ ಜನವರಿ ಯೊಂದರಲ್ಲೇ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು 15 ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿವೆ. ಇದೇ ವೇಳೆ ರಾಜ್ಯ ಸರಕಾರಗಳು ಎರಡು ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಿವೆ ಎಂದು ಅವರು ತಿಳಿಸಿದರು.