×
Ad

ಔಷಧಗಳ ದುರುಪಯೋಗ ತಡೆಗೆ ಕ್ರಮಕ್ಕೆ ಹಿಮಾಚಲ ಹೈ.ಕೋ. ಆದೇಶ

Update: 2016-03-16 23:33 IST


ಶಿಮ್ಲಾ, ಮಾ.16: ಆಕ್ಸಿಟೋಸಿನ್‌ನ ದುರುಪಯೋಗದ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಹಿಮಾಚಲಪ್ರದೇಶ ಹೈಕೋರ್ಟ್, ದುರುಪಯೋಗದ ಸಾಧ್ಯತೆಯಿರುವ ಔಷಧಗಳ ಉತ್ಪಾದನೆ, ಆಮದು ಹಾಗೂ ಹಂಚಿಕೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಅವರಿಗೆ ನಿರ್ದೇಶನ ನೀಡಿದೆ.

ಡೈರಿ, ಕೃಷಿ ಹಾಗೂ ತೋಟಗಾರಿಕೆಗಳಲ್ಲಿ ಆಕ್ಸಿಟೋಸಿನ್‌ನ ಅವ್ಯಾಹತ ದುರುಪಯೋಗ ನಡೆಯುತ್ತಿದೆ. ರಾಜ್ಯದಲ್ಲಿ ಈ ಪಿಡುಗನ್ನು ನಿವಾರಿಸಲು ಅಥವಾ ತಡೆಯಲು ರಾಜ್ಯ ಹಾಗೂ ಕೇಂದ್ರಗಳ ಅಧಿಕಾರಿಗಳಿಬ್ಬರೂ ಸಂಪೂರ್ಣ ವಿಫಲರಾಗಿದ್ದಾರೆಂದು ಹೈಕೋರ್ಟ್ ಹೇಳಿದೆ.
ಈ ಬಗ್ಗೆ ಕಠಿಣ ನಿಲುವು ತಳೆದ, ಮುಖ್ಯ ನ್ಯಾಯಮೂರ್ತಿ ಮನ್ಸೂರ್ ಅಹ್ಮದ್ ಮಿರ್ ಹಾಗೂ ನ್ಯಾಯಮೂರ್ತಿ ತಾರ್ಲೋಕ್ ಸಿಂಗ್ ಚೌಹಾಣರನ್ನೊಳಗೊಂಡ ವಿಭಾಗೀಯ ಪೀಠವೊಂದು ವಿವಾದಿತ ಪಶು ಔಷಧ ಆಕ್ಸಿಟೋಸಿನ್‌ನ ದುರುಪಯೋಗ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣಗಳನ್ನು ದಾಖಲಿಸುವಂತೆ ಮಂಗಳವಾರ ಪೊಲೀಸರಿಗೆ ಆದೇಶ ನೀಡಿದೆ.
ಔಷಧ ದುರುಪಯೋಗದ ಕುರಿತು ಮಾಧ್ಯಮ ವರದಿಯೊಂದನ್ನು ಸಾರ್ವಜನಿಕ ಹಿತಾಸಕ್ತಿ ವರದಿಯಾಗಿ ಪರಿಗಣಿಸಿದ ನ್ಯಾಯಾಲಯ, ಮೂರು ತಿಂಗಳೊಳಗಾಗಿ ಎಲ್ಲ ಔಷಧ ನಿಯಂತ್ರಣ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಅಕಾಡಮಿಯೊಂದನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಸೋಲನ್ ಜಿಲ್ಲೆಯ ಕಂದಘಾಟ್‌ನ ಸರಕಾರಿ ಪ್ರಯೋಗಾಲಯದಲ್ಲಿ ಆಕ್ಸಿಟೋಸಿನ್‌ನ ಪರೀಕ್ಷೆಗೆ ಮೂರು ತಿಂಗಳೊಳಗಾಗಿ ಪರ್ಯಾಪ್ತ ವ್ಯವಸ್ಥೆ ಕಲ್ಪಿಸುವಂತೆ ಪೀಠವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
 ಹೆಚ್ಚು ಹಾಲು ದೊರೆಯುವಂತೆ ಮಾಡಲು ಜಾನುವಾರುಗಳಿಗೆ ಆಕ್ಸಿಟೋಸಿನ್ ನೀಡುವುದು ಕಂಡುಬಂದಲ್ಲಿ 1960ರ ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯನ್ವಯ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡುವಂತೆಯೂ ಅದು ಪೊಲೀಸರಿಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News