ಭೂ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ಅವಧಿ 6ನೆ ಬಾರಿಗೆ ವಿಸ್ತರಣೆ
ಹೊಸದಿಲ್ಲಿ,ಮಾ.16: ವಿವಾದಾತ್ಮಕ ಭೂ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಬುಧವಾರ ಮತ್ತೆ ನಾಲ್ಕು ತಿಂಗಳು ವಿಸ್ತರಿಸಲಾಗಿದೆ. ಇದು ಆರನೆಯ ವಿಸ್ತರಣೆಯಾಗಿದ್ದು,ಪರಿಹಾರಕ್ಕೆ ಸಂಬಂಧಿಸಿದ ಉಪನಿಯಮದ ಕುರಿತು ವಿವರಗಳನ್ನು ಹಲವಾರು ರಾಜ್ಯಗಳು ಇನ್ನೂ ಸಮಿತಿಗೆ ಸಲ್ಲಿಸದಿದ್ದುದು ಇದಕ್ಕೆ ಕಾರಣವಾಗಿದೆ.
ಮಳೆಗಾಲದ ಅಧಿವೇಶನದ ಮೊದಲ ವಾರದವರೆಗೆ ಅವಧಿ ವಿಸ್ತರಣೆ ಕೋರಿ ಸಮಿತಿಯ ಅಧ್ಯಕ್ಷ ಎಸ್.ಎಸ್.ಅಹ್ಲುವಾಲಿಯಾ ಅವರು ಮಂಡಿಸಿದ ನಿರ್ಣಯವನ್ನು ಸದನವು ಧ್ವನಿಮತದಿಂದ ಅಂಗೀಕರಿಸಿತು.
ಸಾಮಾನ್ಯವಾಗಿ ಮಳೆಗಾಲದ ಅಧಿವೇಶನ ಜುಲೈ ಅಂತ್ಯದಲ್ಲಿ ಆರಂಭಗೊಳ್ಳುತ್ತದೆ.
2013ರ ಭೂ ಸ್ವಾಧೀನ ಕಾನೂನು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗಾಗಿ 2015,ಜನವರಿಯಿಂದ ಅನ್ವಯಗೊಂಡಿದೆ ಮತ್ತು ಹೆಚ್ಚಿನ ಪರಿಹಾರವನ್ನು ಕೋರಿರುವ ಭೂ ಮಾಲಕರ ಹಲವಾರು ವಿವಾದಗಳು ಇತ್ಯರ್ಥಕ್ಕೆ ಬಾಕಿಯಿವೆ.
ಸಮಿತಿಯ ಅಧಿಕಾರಾವಧಿ ಬಜೆಟ್ ಅಧಿವೇಶನದ ಕೊನೆಯ ದಿನವಾಗಿದ್ದ ಬುಧವಾರ ಅಂತ್ಯಗೊಂಡಿದ್ದು,ಕಳೆದ ಡಿ.23ರಂದು ಅಹ್ಲುವಾಲಿಯಾ ಅವರು ಹಿಂದಿನ ವಿಸ್ತರಣೆಯನ್ನು ಕೋರಿದ್ದರು.