ಅನೇಕ ಮನೆ ಬಳಕೆ ಔಷಧಗಳಿಗೆ ನಿಷೇಧ
Update: 2016-03-16 23:43 IST
ಹೊಸದಿಲ್ಲಿ, ಮಾ.16: ನಿಗದಿತ ಡೋಸ್‌ನ ಸಂಯುಕ್ತ ಔಷಧಿಗಳ (ಎಫ್‌ಡಿಸಿ) ಉತ್ಪಾದನೆ ಹಾಗೂ ಮಾರಾಟವನ್ನು ನಿಲ್ಲಿಸುವ ತನ್ನ ನಿರ್ಧಾರದ ಭಾಗವಾಗಿ ಸರಕಾರವು ಸಾಮಾನ್ಯ ಗೃಹ ಬಳಕೆಯ ಔಷಧಗಳಾದ ಕ್ರೋಸಿಸ್ ಆ್ಯಂಡ್ ಫ್ಲೂ, ಡಿ-ಕೋಲ್ಡ್ ಟೋಟಲ್, ನಸವಿಯನ್, ಸುಮೊ, ಓಫ್ಲೋಕ್ಸ್, ಗ್ಯಾಸ್ಟ್ರೋಜಿಟ್, ಚೆರಿಕೋಫ್, ನಿಮುಲಿದ್, ಕೊಫ್ನಿಲ್, ಡೋಲೊ ಕೋಲ್ಡ್, ಡಿಕೋಫ್, 02, ಮಕ್ಕಳ ಸಿರಪ್-ಟಿ.98 ಹಾಗೂ ಟೆಡಿಕೋಫ್‌ಗಳಿಗೆ ನಿಷೇಧ ವಿಧಿಸಿದೆ.
ನಿಗದಿತ ಡೋಸ್ ಸಂಯುಕ್ತವು, 2 ಅಥವಾ ಹೆಚ್ಚು ಔಷಧಗಳನ್ನು ನಿಗದಿತ ಡೋಸ್‌ಗಳ ಅನುಪಾತದಲ್ಲಿ ಮಿಶ್ರ ಮಾಡಲಾಗಿದ್ದು, ಒಂದು ಡೋಸ್‌ನ ರೂಪದಲ್ಲಿ ದೊರೆಯುತ್ತದೆ. ಆರೋಗ್ಯ ಸಚಿವಾಲಯವು ಮಾ.12ರ ಅಧಿಸೂಚನೆಯೊಂದರಲ್ಲಿ ತಕ್ಷಣದಿಂದ ಜಾರಿಯಾಗುವಂತೆ ಸುಮಾರು 350 ಎಫ್‌ಡಿಸಿಗಳನ್ನು ನಿಷೇಧಿಸಿದೆ. ಈ ಔಷಧಿಗಳ ಮಿಶ್ರಣದ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ರಚಿಸಲಾಗಿದ್ದ ತಜ್ಞರ ಸಮಿತಿಯೊಂದು ಈ ಬಗ್ಗೆ ಶಿಫಾರಸು ಮಾಡಿತ್ತು.