×
Ad

ಲೋಕಾಯುಕ್ತದ ವಿರುದ್ಧ ಸಂಚು

Update: 2016-03-16 23:49 IST

ಕಳೆದ ಕೆಲವು ವರ್ಷಗಳಿಂದ ಲೋಕಾಯುಕ್ತವೆನ್ನುವುದು ರಾಜಕಾರಣಿಗಳಿಗೆ ನೆತ್ತಿಯ ಮೇಲೆ ತೂಗುವ ಕತ್ತಿಯಂತಾಗಿದೆ. ಲೋಕಾಯುಕ್ತದ ಕುತ್ತಿಗೆಯಲ್ಲಿರುವ ಸರಪಳಿಯನ್ನು ಕಿತ್ತರೆ, ಅದು ರಾಜಕಾರಣಿಗಳ ಮೇಲೆಯೇ ಹಾರುತ್ತದೆ. ಹಾಗೆಂದು ಸರಪಳಿಯನ್ನು ಹಿಡಿದುಕೊಂಡರೆ, ‘ಲೋಕಾಯುಕ್ತದ ಮೇಲೆ ಹಸ್ತಕ್ಷೇಪ’ ಎಂಬ ಆರೋಪ. ಲೋಕಾಯುಕ್ತಕ್ಕೆ ಸರ್ವಾಕಾರವನ್ನು ಕೊಡುವುದನ್ನು ವಿರೋಧ ಪಕ್ಷ, ಆಡಳಿತ ಪಕ್ಷ ಜೊತೆಜೊತೆಯಾಗಿ ವಿರೋಸುತ್ತಿದೆ. ಮತ್ತು ಲೋಕಾಯುಕ್ತವನ್ನು ಹೇಗಾದರೂ ಸರಿ, ಮುಗಿಸಿ ಬಿಡಬೇಕು ಎಂದು ಎಲ್ಲ ಪಕ್ಷಗಳ ಸರಕಾರಗಳೂ ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿವೆ. ಇತ್ತೀಚಿನ ದಿನಗಳಲ್ಲಿ, ಲೋಕಾಯುಕ್ತಕ್ಕೆ ನೇಮಕ ಮಾಡಲು ಅರ್ಹ ಲೋಕಾಯುಕ್ತರೇ ಸರಕಾರಕ್ಕೆ ಸಿಗುತ್ತಿಲ್ಲ. ಇರುವ ಲೋಕಾಯುಕ್ತರೂ ಭ್ರಷ್ಟಾಚಾರದ ಆರೋಪ ಹೊತ್ತು ಮನೆಗೆ ತೆರಳಿದ ಬಳಿಕ, ಆ ಮುಳ್ಳಿನ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಮಾಜಿ ನ್ಯಾಯಾಧೀಶರೆಲ್ಲ ಅಂಜುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೀಗ ಈ ಎಲ್ಲ ಕಗ್ಗಂಟನ್ನು ಬಗೆ ಹರಿಸಲು ಸರಕಾರ ಅಡ್ಡ ದಾರಿ ಹಿಡಿದಂತಿದೆ. ಜನರ ಗಮನ ಲೋಕಾಯುಕ್ತದಿಂದ ಬೇರೆ ಕಡೆಗೆ ಸರಿಯುವುದಕ್ಕಾಗಿಯೇ ‘ಭ್ರಷ್ಟಾಚಾರ ನಿಗ್ರಹ ದಳ’ ಎನ್ನುವ ಹೊಸ ಸಂಸ್ಥೆಯನ್ನು ಮುಂದಿಟ್ಟಿದೆ. ಹೊಸತು ಎನ್ನುವುದಕ್ಕಿಂತ, ಹೊಸ ಬಾಟಲಿ, ಹಳೆ ಮದ್ಯ ಎಂದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಯಾಕೆಂದರೆ, ಭ್ರಷ್ಟಾಚಾರ ನಿಗ್ರಹ ದಳದ ಹೊರಗಿನ ಮೈಮಾಟ ಹೊಸತೇ ಹೊರತು, ಇದು ಹೊಸತಾದ ವ್ಯವಸ್ಥೆಯಲ್ಲ. 1983ರಲ್ಲಿ ಇದು ಅಸ್ತಿತ್ವದಲ್ಲಿತ್ತು. ಆದರೆ ಅದರ ಕಾರ್ಯನಿರ್ವಹಣೆ ತೃಪ್ತಿಕರ ವಾಗದೇ ಇದ್ದುದರಿಂದ, ಆ ಸ್ಥಾನವನ್ನು ಲೋಕಾಯುಕ್ತ ಪರಿಣಾಮಕಾರಿಯಾಗಿ ತುಂಬಿತು. 

ಲೋಕಾಯುಕ್ತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಂತೆ ರಾಜಕಾರಣಿಗಳು ಸಾಕಷ್ಟು ಪ್ರಯತ್ನ ಪಟ್ಟರಾದರೂ, ತನ್ನ ಮಿತಿಯಲ್ಲಿ ಈ ಸಂಸ್ಥೆ ನಿರ್ವಹಿಸಿದ ಸಾಧನೆ ಸಣ್ಣದೇನೂ ಅಲ್ಲ. ವೆಂಕಟಾಚಲಯ್ಯ ಅವರ ಕಾಲದಲ್ಲಿ, ಲೋಕಾಯುಕ್ತ ಹೆಚ್ಚು ಜೀವಪಡೆಯಿತು. ಸರಕಾರಿ ಅಕಾರಿಗಳು ಬೆಚ್ಚಿ ಬೀಳುವಂತಹ ಸನ್ನಿವೇಶ ನಿರ್ಮಾಣವಾಯಿತು. ಪೊಲೀಸ್ ಅಕಾರಿಗಳನ್ನೂ ಲೋಕಾಯುಕ್ತ ಬಿಡಲಿಲ್ಲ. ಮಾಧ್ಯಮಗಳಲ್ಲಿ ಸದಾ ಲೋಕಾಯುಕ್ತ ಸುದ್ದಿ ಮಾಡತೊಡಗಿತು. ಅಲ್ಲಿಂದ, ಸಂತೋಷ್ ಹೆಗ್ಡೆಯವರ ಕಾಲದಲ್ಲಿ, ರಾಜಕಾರಣಿಗಳೂ ಲೋಕಾಯುಕ್ತಕ್ಕೆ ಹೆದರುವಂತಹ ಸನ್ನಿವೇಶ ನಿರ್ಮಾಣವಾಯಿತು. ಒಂದು ಸರಕಾರವನ್ನೇ ಬುಡಮೇಲು ಮಾಡುವ ಶಕ್ತಿ ತನಗಿದೆ ಎನ್ನುವುದನ್ನು ಲೋಕಾಯುಕ್ತ ತೋರಿಸಿಕೊಟ್ಟಿದ್ದು ಸಂತೋಷ್ ಹೆಗ್ಡೆ ಕಾಲದಲ್ಲಿ. ಅನಂತರ ಲೋಕಾಯುಕ್ತವನ್ನು ಹೇಗೆ ನಿಷ್ಕ್ರಿಯಗೊಳಿಸಬೇಕು ಎನ್ನುವ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳು ಸಮಾನಮನಸ್ಕರಾಗಿ ಯೋಚಿಸತೊಡಗಿದವು. ಯಾವುದೇ ಲೋಕಾಯುಕ್ತನನ್ನು ಆಯ್ಕೆ ಮಾಡಿದರೂ, ಆತನ ಅಕ್ರಮಗಳನ್ನು ಹೊರತೆಗೆದು ಆ ಕುರ್ಚಿಯೇರದಂತೆ ನೋಡಿಕೊಳ್ಳುವ ತಂತ್ರವನ್ನು ರಾಜಕಾರಣಿಗಳೇ ಅನುಸರಿಸತೊಡಗಿದರು. ಪರಿಣಾಮವಾಗಿ, ಹೆಗ್ಡೆಯ ಅನಂತರ, ಲೋಕಾಯುಕ್ತಕ್ಕೆ ಸಮರ್ಥ ನಾಯಕತ್ವ ಸಿಗಲೇ ಇಲ್ಲ. ಇದೀಗ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಇನ್ನೊಂದು ಸಂಸ್ಥೆಯನ್ನು ತರುವ ಹುನ್ನಾರವೊಂದು ನಡೆಯುತ್ತಿದೆ. ಲೋಕಾಯುಕ್ತದ ಕೈಯಲ್ಲಿರುವ ಅಕಾರವನ್ನು ಈ ಸಂಸ್ಥೆಗೆ ಹಸ್ತಾಂತರಿಸಿ, ಅದರ ಸೂತ್ರವನ್ನು ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಸರಕಾರದ ಉದ್ದೇಶವಾಗಿದೆ. ಲೋಕಾಯುಕ್ತ ಸಂಸ್ಥೆಗಿರುವ ಅಕಾರ ವಿಶಾಲವಾದುದು. ಅದು ರಾಜಕಾರಣಿಗಳ ಮೇಲೂ, ಪೊಲೀಸ್ ಅಕಾರಿಗಳ ಮೇಲೂ ದಾಳಿ ನಡೆಸಬಹುದಾಗಿದೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹತ್ತು ಹಲವು ಮಿತಿಗಳಿಗೆ. ಮುಖ್ಯವಾಗಿ ಅದರ ನಿಯಂತ್ರಣ ಅಕಾರಿಗಳ ಕೈಯಲ್ಲಿರುತ್ತವೆ. ಮತ್ತು ಅಕಾರಿಗಳ ನಿಯಂತ್ರಣ ಸರಕಾರದ ಕೈಯಲ್ಲಿರುತ್ತದೆ. ಲೋಕಾಯುಕ್ತವನ್ನು ನಿಧಾನಕ್ಕೆ ದುರ್ಬಲಗೊಳಿಸಿ, ಆ ಸ್ಥಾನದಲ್ಲಿ ನಿಗ್ರಹ ದಳವನ್ನು ಬಲಪಡಿಸಿದರೆ, ಒಂದು ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಉರುಳಿಸಿದಂತಾಗುತ್ತದೆ. ಇಲ್ಲಿ ಲೋಕಾಯುಕ್ತದ ಅಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದು ರಾಜಕಾರಣಿಗಳು ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಲೋಕಾ ಪೊಲೀಸರಿಗಿರುವ ಠಾಣಾ ಅಕಾರವನ್ನು ಕಿತ್ತು, ಅದನ್ನು ನಿಗ್ರಹ ದಳಕ್ಕೆ ನೀಡುವ ಉದ್ದೇಶ ಸರಕಾರಕ್ಕಿದೆ. ಹೀಗಾದರೆ ಲೋಕಾಯುಕ್ತ ಸಂಪೂರ್ಣ ಎರಡೂ ರೆಕ್ಕೆಗಳನ್ನು ಕಳೆದುಕೊಂಡಂತೆಯೇ. ಲೋಕಾಯುಕ್ತ ಹೆಸರಿಗಷ್ಟೇ ಅಸ್ತಿತ್ವದಲ್ಲಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಕಾರವನ್ನು ಹೊಂದಿಲ್ಲದೇ ಇದ್ದರೆ, ಅದು ಭ್ರಷ್ಟರ ಪಾಲಿಗೆ ತಮಾಷೆಯ ತನಿಖಾ ಸಂಸ್ಥೆಯಾಗಿ ಬಿಡುತ್ತದೆ. ಒಂದು ರೀತಿಯಲ್ಲಿ ಲೋಕಾಯುಕ್ತವನ್ನು ಇದ್ದೂ ಇಲ್ಲದಂತೆ ಮಾಡುವುದು ಸರಕಾರದ ಉದ್ದೇಶವಾಗಿ ಕಾಣುತ್ತದೆ.

ಈಗಾಗಲೇ ವಿಲವಾಗಿರುವ ತನಿಖಾ ಸಂಸ್ಥೆಗೆ ಮತ್ತೆ ಜೀವಕೊಡುವ ಬದಲು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಲೋಕಾಯುಕ್ತಕ್ಕೆ ಇನ್ನಷ್ಟು ಅಕಾರ ಕೊಡುವುದು ಸರಕಾರದ ಆದ್ಯತೆಯಾಗಬೇಕು. ಇರುವ ಅಕಾರವನ್ನು ಕಿತ್ತುಕೊಳ್ಳುವ ಬದಲು ವಿಚಾರಣೆ, ಬಂಧನ, ಶಿಕ್ಷೆ ವಿಸುವುದಕ್ಕೆ ಸಂಬಂಸಿ ಇನ್ನಷ್ಟು ಅಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು. ಇವಕ್ಕೆಲ್ಲ ಪೂರಕವಾಗಿ ಆದಷ್ಟು ಬೇಗ, ಹೊಸ ಬಲಿಷ್ಠ ಲೋಕಾಯುಕ್ತರನ್ನು ನೇಮಕಮಾಡಬೇಕು. ಹಾಗೆಯೇ ನನೆಗುದಿಯಲ್ಲಿರುವ ನೂರಾರು ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸಲು ಲೋಕಾಯುಕ್ತಕ್ಕೆ ಶಕ್ತಿಯನ್ನು ತುಂಬಬೇಕು. ಯಾವ ಕಾರಣಕ್ಕೂ ಲೋಕಾಯುಕ್ತಕ್ಕಿರುವ ಅಕಾರವನ್ನು ಸರಕಾರ ಕಿತ್ತುಕೊಳ್ಳಬಾರದು. ಈಗಾಗಲೇ ಭ್ರಷ್ಟಾಚಾರದಿಂದ ನಾಡು ಸೊರಗಿ ಹೋಗಿರುವ ಹೊತ್ತಿನಲ್ಲಿ, ಲೋಕಾಯುಕ್ತ ದುರ್ಬಲಗೊಂಡರೆ, ಭ್ರಷ್ಟರ ಶಕ್ತಿ ಹೆಚ್ಚುತ್ತದೆ. ನಾಡು ಸರ್ವನಾಶದೆಡೆಗೆ ಸಾಗುವುದಕ್ಕೆ ಇದ್ದಷ್ಟೇ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News