ಭಾರತ್ ಮಾತಾಕಿ ಜೈ ಹೇಳುವುದು ಅನಿಸ್ಲಾಮಿಕವಲ್ಲ, ಅಂತಹವರು ಪವಿತ್ರಕುರ್‌ಆನ್ ಅಧ್ಯಯನ ಮಾಡಲಿ ಪಾಕ್ ವಿದ್ವಾಂಸ
ಹೊಸದಿಲ್ಲಿ, ಮಾರ್ಚ್.18: ಪಾಕಿಸ್ತಾನದ ಪ್ರಮುಖ ಇಸ್ಲಾಮೀ ವಿದ್ವಾಂಸ ಮಿನ್ಹಾಜುಲ್ ಕುರ್‌ಆನ್ ಇಂಟರ್‌ನ್ಯಾಶನಲ್‌ನ ಸಂಯೋಜಕ ಮುಹಮ್ಮದ್ ತಾಹಿರುಲ್ ಕಾದ್ರಿ ಭಾರತದಲ್ಲಿ ತನಗೆ ಸಿಗುವ ಪ್ರೀತಿ ಕಡಿಮೆಯೇನಲ್ಲ ಎಂದು ಹೇಳಿದ್ದಾರೆ. ಭಾರತೀಯ ಚ್ಯಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ’ಅಲ್ಲಾಹನಾಣೆಗೂ ಹೇಳುತ್ತಾನೆ. ತನಗೆ ಪಾಕಿಸ್ತಾನದಲ್ಲಿ ಎಷ್ಟು ಪ್ರೀತಿ ಸಿಕ್ಕಿದೆಯೋ ಭಾರತದಲ್ಲಿ ಅದಕ್ಕಿಂತ ಕಡಿಮೆ ಪ್ರೀತಿ ಸಿಕ್ಕಿಲ್ಲ. ಸಮಸ್ಯೆ ಜನರ ಮನಸ್ಸಿನಲ್ಲಿಲ್ಲ. ಜನರು ಪರಸ್ಪರ ಭೇಟಿಯಾಗಲು ಬಯಸುತ್ತಾರೆ. ಜೊತೆಗೂಡಲು ಇಷ್ಟಪಡುತ್ತಾರೆ. ನಮ್ಮ ರಾಜಕೀಯ ಜನರನ್ನು ಭೇಟಿಯಾಗದಿದ್ದರೆ ಅದರಲ್ಲಿ ಜನರ ತಪ್ಪೇನಿದೆ. ಜನರು ಪರಸ್ಪರ ಭೇಟಿಯಾಗುವ ಮತ್ತು ಭೇಟಿ ಮಾಡಿಸುವ ಕೆಲಸ ವ್ಯಾಪಕಗೊಳ್ಳಬೇಕಿದೆ’ ಎಂದು ಕಾದ್ರಿ ಹೇಳಿದ್ದಾರೆ. ಕೆಲವು ದಿನಗಳಿಗೆ ಮುಂಚೆ ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ತನಗೆ ಭಾರತದಲ್ಲಿ ಹೆಚ್ಚು ಪ್ರೀತಿ ದೊರೆಯುತ್ತದೆ ಎಂದು ಹೇಳಿದ್ದರು. ಅದಕ್ಕಾಗಿ ಅವರನ್ನು ಕಟುವಾಗಿ ಟೀಕಿಸಲಾಗಿತ್ತು. ಲಾಹೋರ್ ಹೈಕೋರ್ಟ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.
ಏನು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಯಾವಾಗಲೂ ವೈರಿಯೇ ಆಗಿರುವುದೇ ಎಂದು ಕಾದ್ರಿ ಪ್ರಶ್ನಿಸಿದರು. ಒಂದು ವೇಳೆ ನಾವು ಹೀಗೆ ಮುಂದುವರಿದರೆ ಮುಂಬರುವ ಪೀಳಿಗೆಗೆ ವಂಚನೆ ನಡೆಸಿದಂತಾಗುವುದು. ಎರಡೂ ದೇಶಗಳ ಜನರಿಗೆ ಹೋಗಿ ಬರುವ ಸವಲತ್ತು ದೊರೆಯಬೇಕು. ಜನರು ಗಂಟೆಗಳ ಕಾಲ ಸರತಿ ನಿಲ್ಲುವುದು ಕೊನೆಗೊಳ್ಳಬೇಕಿದೆ ಎಂದು ಕಾದ್ರಿಹೇಳಿದ್ದಾರೆ. ಭಾರತ್ ಮಾತಾಕಿ ಜೈ ಘೋಷಣೆ ವಿವಾದ ಕುರಿತು ಅವರಲ್ಲಿ ಪ್ರಶ್ನಿಸಲಾದಾಗ ದೇಶವನ್ನು ತಾಯಿಯೆಂದು ಭಾವಿಸುವುದು ಒಳ್ಳೆಯ ವಿಷಯವಾಗಿದೆ. ಭಾರತ್ ಮಾತಾಕಿ ಜೈ ಘೋಷಣೆ ಕೂಗುವುದು, ಜನ್ಮನಾಡನ್ನು ತಾಯಿಎನ್ನುವುದು ಖಂಡಿತವಾಗಿಯೂ ಅನಿಸ್ಲಾಮಿಕವಲ್ಲ. ತಮ್ಮ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಮುಸ್ಲಿಮನೂ ಈ ಘೋಷಣೆ ಕೂಗಬೇಕಿದೆ. ಯಾರಾದರೂ ದೇಶಕ್ಕಾಗಿ ಘೋಷಣೆಕೂಗುವುದು ಇಸ್ಲಾಮ್ ವಿರೋಧಿ ಎಂದು ಯಾರಾದರೂ ಭಾವಿಸುವುದಿದ್ದರೆ ಅಂತಹವರು ಪವಿತ್ರಕುರ್‌ಆನ್ ಅಧ್ಯಯನವನ್ನು ನಡೆಸಲಿ ಎಂದು ಕಾದ್ರಿ ಹೇಳಿದ್ದಾರೆ.
ಸಾಮಾನ್ಯ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧ ಮಾತಾಡುತ್ತಾರೆ. ಆದರೆ ಅವರ ಸುದ್ದಿಗಳು ಪ್ರಕಟವಾಗುವುದಿಲ್ಲ. ಎಲ್ಲಾದರೂ ಬಾಂಬ್ ಸ್ಫೋಟವಾದರೆ, ಕೊರಳು ಕೊಯ್ಯಲ್ಪಟ್ಟರೆ ಅಂತಹ ಸುದ್ದಿಗಳು ಪ್ರಕಟವಾಗುತ್ತವೆ. ಸಾಮಾನ್ಯ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧವಾಗಿದ್ದಾರೆ ಎಂದು ಕಾದ್ರಿ ಪ್ರತಿಕ್ರಿಯಿಸಿದ್ದಾರೆ. ಕಾದ್ರಿಯವರು ಕ್ರಿಕೆಟ್‌ನಿಂದ ರಾಜಕಾರಣಿಯಾಗಿ ಪರಿವರ್ತನೆಯಾದ ಇಮ್ರಾನ್ ಖಾನ್ ಜೊತೆ ಸೇರಿ ಅಂದಿನ ಆಸಿಫ್ ಅಲಿ ಖಾನ್ ಜರ್ದಾರಿ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜೊತೆಗೆ ಭಯೋತ್ಪಾದನೆ ವಿರುದ್ಧ 600 ಪುಟಗಳ ಫತ್ವಾವನ್ನೂ ಜಾರಿಗೊಳಿಸಿದ್ದಾರೆ.