×
Ad

ಕುದುರೆ ಕಾಲು ಮುರಿದ ಬಳಿಕ ಕುದುರೆ ವ್ಯಾಪಾರ !

Update: 2016-03-18 17:20 IST

ಡೆಹ್ರಾಡೂನ್ :ಪೊಲೀಸ್ ಕುದುರೆ ಶಕ್ತಿಮಾನ್‌ಗೆ ಲಾಠಿಯೇಟು ನೀಡಿ ಅದರ ಕಾಲು ಮುರಿತಕ್ಕೆ ಕಾರಣವಾಗಿದ್ದಾರೆನ್ನಲಾದ ಬಿಜೆಪಿ ಶಾಸಕ ಗಣೇಶ್ ಜೋಶಿಯವರನ್ನು ಶುಕ್ರವಾರ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಯು ತಾನು ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿರುವುದು ಉತ್ತರಖಂಡ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಕ್ಷದೊಳಗೆ ‘ಹೆಚ್ಚುತ್ತಿರುವ ಅಸಮಾಧಾನ’ದಿಂದಾಗಿ ಸುಮಾರು 12-13 ಕಾಂಗ್ರೆಸ್ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ನಾಯಕ ತಿರತ್ ರಾವತ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

‘‘ಸಂಜೆಯೊಳಗಾಗಿ ಏನು ನಡೆಯುತ್ತಿದೆಯೆಂದು ನಿಮಗೆ ಗೊತ್ತಾಗಲಿದೆ. ನಾವು ಜನರ ಆಯ್ಕೆ’’ ಎಂದು ಹಿರಿಯ ಬಿಜೆಪಿ ನಾಯಕ ಭಗತ್ ಸಿಂಗ್ ಕೊಶ್ಯಾರಿ ಹೇಳಿದ್ದಾರೆ.

ರಾಜ್ಯ ಬಜೆಟ್ ಅನುಮೋದನೆಯ ಸಂದರ್ಭ ತಾವು ಸದನದಿಂದ ಹೊರಗುಳಿಯುವುದಾಗಿ ಕೆಲವು ಭಿನ್ನಮತೀಯ ಕಾಂಗ್ರೆಸ್ ಶಾಸಕರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಬಿಜೆಪಿ ಸಂಸದರಾದ ರಮೇಶ್ ಪೊಖ್ರಿಯಾಲ್ ನಿಶಾಂಕ್, ಭಗತ್ ಸಿಂಗ್ ಕೊಶ್ಯರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಘಿಯ ಡೆಹ್ರಾಡೂನಿನಲ್ಲಿ ಸಭೆ ಸೇರಿ ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲಿದ್ದಾರೆ.

ಆದರೆ ಕಾಂಗ್ರೆಸ್ ಈ ವಿಚಾರವನ್ನು ಅಲ್ಲಗಳೆದಿದ್ದು ಪಕ್ಷದ ಎಲ್ಲಾ ಶಾಸಕರೂ ಪಕ್ಷದ ಜತೆಯಲ್ಲಿಯೇ ಇದ್ದಾರೆಂದು ತಿಳಿಸಿದೆ.

ಹದಿನಾಲ್ಕು ವರ್ಷದ ಕುದುರೆ ಶಕ್ತಿಮಾನ್‌ನ ಕಾಲನ್ನು ಪ್ರತಿಭಟನೆಯೊಂದರ ಸಂದರ್ಭ ಮುರಿದ ಆರೋಪದ ಮೇಲೆ ಶಾಸಕ ಜೋಷಿ ಬಂಧನವಾದ ನಂತರ ಈ ನಾಟಕೀಯ ಬೆಳವಣಿಗೆಗಳು ನಡೆದಿವೆ.ಈ ಬಂಧನವನ್ನು ಟೀಕಿಸಿರುವ ಪಕ್ಷಈ ವಿಚಾರವನ್ನು ಸದನದಲ್ಲೂ ಪ್ರಸ್ತಾಪಿಸಿದ್ದು. ಒಟ್ಟು 70 ಸದಸ್ಯರ ಸದನದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ 42 ಸದಸ್ಯರ ಬೆಂಬಲ ಹೊಂದಿದ್ದು ಅವರಲ್ಲಿ 37 ಮಂದಿ ಕಾಂಗ್ರೆಸ್ ಶಾಸಕರು, ಮೂವರು ಪಕ್ಷೇತರರು ಹಾಗೂ ಇಬ್ಬರು ಬಿಎಸ್‌ಪಿ ಸದಸ್ಯರು ಸೇರಿದ್ದಾರೆ. ಬಿಜೆಪಿಗೆ 28 ಸದಸ್ಯರ ಬೆಂಬಲವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News