ತನ್ನ ವೀರ್ಯ ಮಾರಿ ಲಕ್ಷಗಟ್ಟಲೆ ಸಂಪಾದಿಸುವ 'ಯುವರಾಜ'

Update: 2016-03-20 04:13 GMT

ನವದೆಹಲಿ, ಮಾ.20: ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಭಾರತದ ಟಿ-20 ಆಟಗಾರರಲ್ಲಿ ಹಲವು ಮಂದಿ ಅಭಿಮಾನಿಗಳಿಗೆ ಫೇವರಿಟ್ ಆಟಗಾರ. ಆದರೆ ಇಲ್ಲಿನ ಐಎಆರ್‌ಐ ಕ್ಯಾಂಪಸ್‌ನಲ್ಲಿ ಮೋದಿ ಶನಿವಾರ ಉದ್ಘಾಟಿಸಿದ ಕೃಷಿ ಉನ್ನತಿ ಮೇಳದಲ್ಲಿ ಅವರಿಗಿಂತ ಹೆಚ್ಚು ಗಮನ ಸೆಳೆದದ್ದು ನಾಲ್ಕು ಕಾಲಿನ ಯುವರಾಜ.

ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಮಂದಿ ರೈತರು ಯುವರಾಜನ ದರ್ಶನಕ್ಕೆ ಮುಗಿ ಬೀಳುತ್ತಿದ್ದರು. ಮುರ್ರಾ ತಳಿಯ ಈ ಬೀಜದ ಹೋರಿ ಆಕರ್ಷಣೆಯ ಕೇಂದ್ರವಾಗಿತ್ತು. ಯುವರಾಜನ ಹೆಮ್ಮೆಯ ಮಾಲೀಕ ಕರ್ಮವೀರ್ ಸಿಂಗ್, ಹಾಲಿನ ಎಮ್ಮೆಗಳಿಗೆ ಕೃತಕ ಗರ್ಭಧಾರಣೆಗೆ ಕೆಲ ಪ್ರಾಣಿಗಳ ವೀರ್ಯವನ್ನು ನೀಡುವ ಮೂಲಕ ಸಹಕರಿಸಲು ಯುವರಾಜನ ಮನವೊಲಿಸುವ ಪ್ರಯತ್ನದಲ್ಲಿದ್ದರು.

ಹರ್ಯಾಣದ ಕುರುಕ್ಷೇತ್ರದ ಸುನಾನಿಯನ್ ಗ್ರಾಮದಲ್ಲಿರುವ ಕರ್ಮವೀರ್ ಅವರ ತೋಟದಲ್ಲಿ ಯುವರಾಜನ ವೀರ್ಯ ಸಂಗ್ರಹಿಸಿ, ಸುರಕ್ಷಿತವಾಗಿ ದಾಸ್ತಾನು ಮಾಡುವ ಅತ್ಯಾಧುನಿಕ ವ್ಯವಸ್ಥೆಯನ್ನು ವೀಕ್ಷಿಸುವಂತೆ ರೈತರಿಗೆ ಸಲಹೆ ನೀಡಲಾಗುತ್ತಿತ್ತು.
ಇನ್ನೊಂದು ಪ್ರಾಣಿಯ ಸಹಾಯದಿಂದ ಅಥವಾ ಎಲೆಕ್ಟ್ರೋ ಸ್ಟಿಮ್ಯುಲೇಟರ್ ಯಂತ್ರದ ಸಹಾಯದಿಂದ 4 ರಿಂದ 6 ಮಿಲಿಲೀಟರ್ ಯುವರಾಜನ ವೀರ್ಯ ಸ್ಖಲಿಸುವಂತೆ ಮಾಡಿ, ಅದನ್ನು 500 ರಿಂದ 600 ಜಾನುವಾರುಗಳಿಗೆ ಕೃತಕ ಗರ್ಭಧಾರಣೆಗೆ ಸಾಕಾಗುವಷ್ಟು ವೈಜ್ಞಾನಿಕವಾಗಿ ಮಾರಾಟ ಮಾಡಲಾಗುತ್ತದೆ. ದ್ರವೀಕೃತ ಸಾರಜನಕದಲ್ಲಿ ದಾಸ್ತಾನು ಮಾಡಲಾದ ಪ್ಲಾಸ್ಟಿಕ್ ನಳಿಗೆಯಲ್ಲಿರುವ ಒಂದು ಡೋಸ್‌ಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ.


ಯುವರಾಜ ವಾರ್ಷಿಕವಾಗಿ 40 ರಿಂದ 45 ಲಕ್ಷ ರೂಪಾಯಿಯ ಆದಾಯ ಗಳಿಸುತ್ತಿದ್ದಾನೆ. ಆದರೆ ಬಹುತೇಕ ಹಣವನ್ನು ಉತ್ತಮ ಆರೋಗ್ಯ ಸ್ಥಿತಿಯಲ್ಲಿ ವೀರ್ಯ ಸಂಗ್ರಹಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಕರ್ಮವೀರ ಸಿಂಗ್ ಹೇಳುತ್ತಾರೆ.

ಎಂಟು ವರ್ಷದ ಯುವರಾಜನ ಆಹಾರಕ್ಕಾಗಿ ಪ್ರತಿದಿನ 3 ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಯುವರಾಜನಿಂದ ಸಂಗ್ರಹವಾದ ಹಣವನ್ನು ಇತರ ಎಮ್ಮೆಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಲು ವೆಚ್ಚ ಮಾಡುತ್ತಿರುವುದಾಗಿ ವಿವರಿಸಿದರು.

300 ರೂಪಾಯಿಗಿಂತ ಅಧಿಕ ದರ ನಿಗದಿಪಡಿಸಬಹುದು. ಆದರೆ ಸಮಾಜಸೇವೆಯಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಯುವರಾಜ್ ಸಿಂಗ್ ಕ್ರಿಕೆಟ್ ಸ್ಟಾರ್. ಆ ಕಾರಣಕ್ಕೆ ಅವರ ಹೆಸರನ್ನು ಪುಟ್ಟ ಕರುವಿಗೆ ಇಟ್ಟಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News