×
Ad

ವಿಕಾಸವೊಂದೇ ಮೋದಿ ಮಂತ್ರ: ರಾಜನಾಥ್

Update: 2016-03-20 23:28 IST

ಹೊಸದಿಲ್ಲಿ, ಮಾ.20: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿಂದು ತನ್ನ ಅಭಿವೃದ್ಧಿಯ ಮಂತ್ರವನ್ನು ಪುನರುಚ್ಛರಿಸಿದ್ದಾರೆ. ಆದರೆ, ಸರಕಾರವನ್ನು ಈ ಹಾದಿಯಿಂದ ಬದಿಗೆ ಸರಿಸಲು ಪ್ರಯತ್ನಗಳು ನಡೆಯುತ್ತಿವೆಯೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಪಕ್ಷಕ್ಕೆ ಜ್ಞಾಪಿಸಿದ್ದಾರೆ.

ಕೆಲವು ಶಕ್ತಿಗಳು ಅಭಿವೃದ್ಧಿಯ ಹಾದಿಯಿಂದ ತಮ್ಮನ್ನು ತಳ್ಳಲು ಪ್ರಯತ್ನಿಸುತ್ತಿವೆ. ಪಕ್ಷದ ಸದಸ್ಯರು ಅವರ ಪ್ರಭಾವಕ್ಕೊಳಗಾಗದೆ ದೃಢವಾಗಿ ನಿಲ್ಲಬೇಕು. ಅಭಿವೃದ್ಧಿ ಕಾರ್ಯ ನಡೆಸುವ ತಮ್ಮ ಪ್ರಯತ್ನವನ್ನು ಹಾಳುಗೆಡವಲು ಮತ್ತೆ ಮತ್ತೆ ಪ್ರಯತ್ನಗಳು ನಡೆಯುತ್ತಿರುವ ಹೊರತಾಗಿಯೂ ತಾವು ತಮ್ಮ ಕಾರ್ಯಸೂಚಿಗೆ ಅಂಟಿಕೊಳ್ಳಬೇಕೆಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಯವರ ಸಮಾರೋಪ ಭಾಷಣವನ್ನುಲ್ಲೇಖಿಸುತ್ತ ಅವರು ಮಾಧ್ಯಮಗಳಿಗೆ ತಿಳಿಸಿದರು.
ವಿಪಕ್ಷವು ತಮ್ಮನ್ನು ಋಣಾತ್ಮಕ ರಾಜಕೀಯದತ್ತ ಎಳೆಯುತ್ತಿದೆ. ಆದರೆ, ತಾವು ತಮ್ಮ ಕಾರ್ಯಸೂಚಿಯ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ವಿಪಕ್ಷಗಳ ಋಣಾತ್ಮಕ ರಾಜಕೀಯದ ಬಲೆಯೊಳಗೆ ಸಿಲುಕಬೇಡಿರೆಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದರೆನ್ನಲಾಗಿದೆ.
ವಿಕಾಸ, ವಿಕಾಸ, ವಿಕಾಸ, ಇದಕ್ಕೆ ತನ್ನ ಗಮನ. ಇದು ದೇಶದ ಎಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರವೆಂದು ಪ್ರಧಾನಿ ಅಭಿಪ್ರಾಯಿಸಿದರೆಂದು ರಾಜನಾಥ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಸೃಜನಶೀಲತೆಯಿರಲಿ. ಪ್ರತಿ ಕಾರ್ಯಕರ್ತ ದೇಶಾದ್ಯಂತದ ಗ್ರಾಮಗಳಿಗೆ ತಲುಪಬೇಕು ಎಂದ ಪ್ರಧಾನಿ, ಮುಖ್ಯವಾಗಿ ದುರ್ಗಮ ಪ್ರದೇಶಗಳಲ್ಲೂ ಪಕ್ಷದ ಸಂಘಟನೆ ವಿಸ್ತಾರವಾದ ಕ್ರಮವನ್ನು ಶ್ಲಾಘಿಸಿದರೆಂದು ಅವರು ಹೇಳಿದರು.
65 ವರ್ಷಗಳಿಂದ ವಿದ್ಯುತ್ ವಂಚಿತವಾಗಿದ್ದ ಹಳ್ಳಿಗಳಿಗೆ ವಿದ್ಯುತ್ ಒದಗಿಸಲು ತಾವು ಯಶಸ್ವಿಯಾಗಿದ್ದೇವೆ. ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ. ಎಲ್ಲ ಕಾರ್ಯಕರ್ತರೂ ಸಮಾನವಾಗಿ ‘ಬೇಟಿ ಬಚಾವೊ ಬೇಟಿ ಪಡಾವೊ’ ಇತ್ಯಾದಿ ಕಾರ್ಯಕ್ರಮಗಳ ಪ್ರಚಾರ ಮಾಡುತ್ತಿದ್ದಾರೆಂದು ಮೋದಿ ಹೇಳಿದರೆಂದು ರಾಜನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News