ದೇಶದ್ರೋಹ ಕಾನೂನು ರದ್ದಿಗೆ
ಹೊಸದಿಲ್ಲಿ,ಮಾ.20: ವಕೀಲರ ಸಂಘವೊಂದು ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ರದ್ದುಗೊಳಿಸುವಂತೆ ಆಗ್ರಹಿಸಿದೆ. ಹೈದರಾಬಾದ್ ಕೇಂದ್ರೀಯ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಮತ್ತು ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸಂಕೀರ್ಣದಲ್ಲಿ ಹಿಂಸಾಚಾರದ ವಿವಾದಾತ್ಮಕ ಘಟನೆಗಳನ್ನು ಅದು ಉಲ್ಲೇಖಿಸಿದೆ.
ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ಗುಂಪು ಹೆಸರಿನ ಈ ಸಂಘವು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಕುರಿತು ಇಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ದೇಶದ್ರೋಹ ಕಾನೂನಿನ ರದ್ದತಿ,ವಿಶ್ವವಿದ್ಯಾನಿಲಯಗಳಿಗೆ ಸ್ವಾಯತ್ತತೆ, ನ್ಯಾಯದ ಆಡಳಿತ ಮತ್ತು ಸಂವಿಧಾನದ ಪರಿಕಲ್ಪನೆಗೆ ನಿಷ್ಠೆಯನ್ನು ಆಗ್ರಹಿಸಿ ನಿರ್ಣಯವನ್ನು ಅಂಗೀಕರಿಸಿದೆ.
ದೇಶದ್ರೋಹಿ ಎಂಬ ಅಸಹನೀಯ ಆರೋಪವನ್ನು ಸಹಿಸದೆ ವೇಮುಲಾ ಆತ್ಮಹತ್ಯೆ ಘಟನೆ ಮತ್ತು ಇಡೀ ವಿವಿಯನ್ನೇ ದೇಶವಿರೋಧಿಗಳ ಕೇಂದ್ರಸ್ಥಾನ ಎಂಬ ಹಣೆಪಟ್ಟಿಗೆ ಕಾರಣವಾದ ಜೆಎನ್‌ಯುದಲ್ಲಿನ ವಿಲಕ್ಷಣ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸರಕಾರದ ನೀತಿಗಳನ್ನು ವಿರೋಧಿಸುವ ವಿದ್ಯಾರ್ಥಿಗಳಿಗೆ ದೇಶವಿರೋಧಿಗಳ ಪಟ್ಟವನ್ನು ಕಟ್ಟಲಾಗುತ್ತದೆ ಮತ್ತು ಅವರ ವಿರುದ್ಧ ಬ್ರಿಟಿಷ್ ಯುಗದ ದೇಶದ್ರೋಹ ಕಾನೂನಿನಡಿ ಮೊಕದ್ದಮೆ ದಾಖಲಿಸಲಾಗುತ್ತಿದೆ. ಭಿನ್ನಾಭಿಪ್ರಾಯದ ಉಸಿರನ್ನಡಗಿಸುವ ಈ ಪ್ರಯತ್ನ ಬ್ರಿಟಿಷರ ಆಡಳಿತವನ್ನು ನೆನಪಿಸುತ್ತಿದೆ ಎಂದು ನಿರ್ಣಯವು ಆರೋಪಿಸಿದೆ.