ಗೋಧಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಸಾಧ್ಯತೆ
ಹೊಸದಿಲ್ಲಿ .ಮಾ.20; ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದೇಶದಲ್ಲಿ 15 ದಶಲಕ್ಷ ಟನ್ ಗೋಧಿ ಉತ್ಪಾದನೆ ಕುಸಿಯಬಹುದು ಎಂದು ಕೈಗಾರಿಕಾ ರಂಗದ ಪ್ರಾತಿನಿಧಿಕ ಸಂಸ್ಥೆ ಅಸೋಚಾವ್ ನೀಡಿರುವ ವರದಿ ವಾಸ್ತವತೆಯಿಂದ ಕೂಡಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಅಂದಾಜು ಅಂಕಿ-ಅಂಶ ನೀಡಿರುವ ಸಚಿವಾಲಯ ಪ್ರಸಕ್ತ ಸಾಲಿನಲ್ಲಿ 93.82 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗುವ ಅಂದಾಜು ಇದೆ. ದೇಶದ ಕೆಲವು ಭಾಗಗಳಲ್ಲಿ ಈ ವರ್ಷ ಅಕಾಲಿಕ ಮಳೆ ಮತ್ತು ಆಲಿಕಲ್ಲು ಕಾಣಿಸಿಕೊಂಡಿದ್ದರಿಂದ ಕೊಂಚ ಮಟ್ಟಿಗೆ ಕೃಷಿ ಉತ್ಪಾದನೆಗೆ ಹಾನಿ ಉಂಟಾಗಿದೆ. ಆದರೂ ಪ್ರಸ್ತುತ ಅಂದಾಜಿನ ಪ್ರಕಾರ, 92 ರಿಂದ 93 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ 86.53 ದಶಲಕ್ಷ ಟನ್ ಉತ್ಪಾದನೆಯಾಗಿತ್ತು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿಕೆ ನೀಡಿ, ಕಳೆದ ಒಂದು ವರ್ಷದಲ್ಲಿ ಗೋಧಿ ಅಂತಾರಾಷ್ಟ್ರೀಯ ಬೆಲೆ ಕುಸಿತ ಹಾಗೂ ದೇಶದ ಗೋಧಿ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಗೋಧಿ ಆಮದಿನ ಮೇಲೆ ಶೇಕಡ 25 ರಷ್ಟು ಸುಂಕ ವಿಧಿಸಿತ್ತು ಎಂದು ತಿಳಿಸಿದ್ದಾರೆ.