ತೆಲಂಗಾಣದಲ್ಲಿ ತಾತ್ಕಾಲಿಕ ಚರ್ಚ್‌ನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು
ನಿಝಾಮಾಬಾದ್,ಮಾ.20: ಕ್ರೈಸ್ತರಿಗಾಗಿ ಪ್ರಾರ್ಥನಾ ಮಂದಿರದ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಆಕ್ಷೇಪ ವ್ಯಕ್ತಪಡಿಸಿದ ನಂತರ ಅಪರಿಚಿತ ವ್ಯಕ್ತಿಗಳು ತಾತ್ಕಾಲಿಕ ಚರ್ಚ್ ವೊಂದನ್ನು ಸುಟ್ಟುಹಾಕಿದ ಘಟನೆ ತೆಲಂಗಾಣದ ನಿಝಾಮಾಬಾದ್‌ನ ಗೋಪನಪಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪೊಲೀಸರು ಪ್ರಕರಣವನ್ನು ದಾಖ ಲಿಸಿಕೊಂಡಿರುವುರಾದರೂ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ನಿಝಾಮಾಬಾದ್ ಎಸ್ಪಿಯವರನ್ನುಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇದಕ್ಕೂ ಮುನ್ನ ನಿಝಾಮಾಬಾದ್‌ನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ 40 ಹಿಂದೂ ಮೂಲಭೂತವಾದಿಗಳ ಗುಂಪು ಸ್ಥಳೀಯ ಪಾಸ್ಟರ್ ಮತ್ತು ಅವರ ಅನುಯಾಯಿಗಳನ್ನು ಥಳಿಸಿತ್ತು. ಅವರೆಲ್ಲ ಪ್ರಾರ್ಥನೆಗಾಗಿ ಸಮಾವೇಶಗೊಂಡಿದ್ದಾಗ ಈ ಹಲ್ಲೆ ನಡೆದಿದ್ದು,ಗಾಯಗೊಂಡಿರುವ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ನಾಲ್ಕರ ಹರೆಯದ ಬಾಲಕಿಯಿದ್ದು,ಆಕೆಯ ಕಾಲು ಮುರಿದಿದೆ.
ಅದೊಂದು ಭೀತಿ ಹುಟ್ಟಿಸುವ ಘಟನೆಯಾಗಿತ್ತು. ಅವರು ನನ್ನ ನಿಲುವಂಗಿಯನ್ನು ಹರಿದೆಸೆದರು. ನಾನೇ ಅವರ ಮುಖ್ಯ ಗುರಿಯಾಗಿದ್ದರಿಂದ ಯದ್ವಾತದ್ವಾ ಪೆಟ್ಟುಗಳೂ ಬಿದ್ದವು. ನಮ್ಮ ಬಳಿಯಿದ್ದ ಬೈಬಲ್‌ನ್ನು ಕಿತ್ತುಕೊಂಡು ಹರಿದು ಕಾಲಿನಲ್ಲಿ ತುಳಿದಿದ್ದಾರೆ. ಹೆದರಿ ದಿಕ್ಕಾಪಾಲಾಗಿ ಓಡಿದ ನಮ್ಮ ಅನುಯಾಯಿಗಳನ್ನು ಗುಂಪು ಅಟ್ಟಿಸಿಕೊಂಡು ಹೋಗಿತ್ತು ಎಂದು ಪಾಸ್ಟರ್ ನಿತಿನ್ ಕುಮಾರ್ ಹೇಳಿದರು.
ಕಳೆದ ರವಿವಾರ ಛತ್ತೀಸಗಡದಲ್ಲಿ ಪೆಂಟೆಕೋಸ್ಟಲ್ ಚರ್ಚ್‌ವೊಂದರ ಮೇಲೆ ಬಜರಂಗಿಗಳು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.