×
Ad

ಜ್ಯುವೆಲ್ಲರಿ ವ್ಯಾಪಾರಿಗಳ ಮುಷ್ಕರ 20ನೆ ದಿನಕ್ಕೆ

Update: 2016-03-21 23:35 IST

ಹೊಸದಿಲ್ಲಿ,ಮಾ.21: ಬೆಳ್ಳಿಯೇತರ ಆಭರಣಗಳಿಗೆ ಶೇ.1ರಷ್ಟು ಅಬಕಾರಿ ಸುಂಕವನ್ನು ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಕೈಬಿಡಬೇಕೆಂದು ಆಗ್ರಹಿಸಿ ಆಭರಣ ಹಾಗೂ ಚಿನ್ನದ ವ್ಯಾಪಾರಿಗಳ ಒಂದು ಬಣವು ನಡೆಸುತ್ತಿರುವ ಮುಷ್ಕರವು ಸೋಮವಾರ 20ನೆ ದಿನವನ್ನು ಪ್ರವೇಶಿಸಿದೆ. ಆದಾಗ್ಯೂ ಕೆಲವು ಪ್ರಮುಖ ಜ್ಯುವೆಲ್ಲರಿ ವ್ಯಾಪಾರಿಗಳ ಸಂಘಟನೆಗಳು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾದ ಬಳಿಕ ಮುಷ್ಕರವನ್ನು ಕೈಬಿಡಲು ನಿರ್ಧರಿಸಿದೆ.

 
 ಅಬಕಾರಿ ಅಧಿಕಾರಿಗಳು ತಮಗೆ ಕಿರುಕುಳ ನೀಡುವುದಿಲ್ಲವೆಂಬ ಬಗ್ಗೆ ಕೇಂದ್ರ ಸರಕಾರ ಭರವಸೆ ನೀಡಿರುವ ಹೊರತಾಗಿಯೂ ಹೊಸದಿಲ್ಲಿಯ ಹಲವು ಪ್ರಮುಖ ಜ್ಯುವೆಲ್ಲರಿ ಮಳಿಗೆಗಳು ಹಾಗೂ ಅಂಗಡಿಗಳು ಇಂದು ಕೂಡಾ ಮುಚ್ಚಿದ್ದವು. ಈ ಮಧ್ಯೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ, ರಾಜಸ್ಥಾನದ ಜೈಪುರ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಜ್ಯುವೆಲ್ಲರಿ ವ್ಯಾಪಾರಿಗಳು ಮುಷ್ಕರವನ್ನು ಮುಂದುವರಿಸಿರುವ ಬಗ್ಗೆ ವರದಿಗಳು ಬಂದಿವೆ.
 ಅಖಿಲ ಭಾರತ ಸರಾಫ ಒಕ್ಕೂಟದ ಉಪಾಧ್ಯಕ್ಷ ಸುರೀಂದರ್‌ಕುಮಾರ್ ಜೈನ್ ಇಂದು ಹೇಳಿಕೆಯೊಂದನ್ನು ನೀಡಿ, ಕೇಂದ್ರ ಸರಕಾರವು ಪ್ರಸ್ತಾಪಿತ ಅಬಕಾರಿ ಸುಂಕ ಕೈಬಿಡುವವರೆಗೂ ಹೊಸದಿಲ್ಲಿಯಲ್ಲಿ ಚಿನ್ನಾಭರಣ ವ್ಯಾಪಾರಿಗಳು ಮುಷ್ಕರವನ್ನು ಮುಂದುವರಿಸಲಿದ್ದಾರೆಂದು ಘೋಷಿಸಿದ್ದಾರೆ.
ಹೊಸದಿಲ್ಲಿಯ ಚಾಂದಿನಿ ಚೌಕ್‌ನಲ್ಲಿ ಜ್ಯುವೆಲ್ಲರಿ ವ್ಯಾಪಾರಿಗಳು, ಆಭರಣಗಳ ಕುಶಲಕರ್ಮಿಗಳು ಹಾಗೂ ಚಿನ್ನದ ವ್ಯಾಪಾರಿಗಳು ಧರಣಿ ನಡೆಸುತ್ತಿದ್ದಾರೆಂದು ಅವರು ತಿಳಿಸಿದರು.

 ಈ ಮಧ್ಯೆ ಅಖಿಲ ಭಾರತ ರತ್ನಗಳು ಹಾಗೂ ಆಭರಣ ವ್ಯಾಪಾರಿಗಳ ಒಕ್ಕೂಟ (ಜಿಜೆಎಫ್), ಭಾರತೀಯ ಚಿನ್ನ-ಬೆಳ್ಳಿ ಹಾಗೂ ಜ್ಯುವೆಲ್ಲರಿ ವ್ಯಾಪಾರಿಗಳ ಸಂಘ (ಐಬಿಬಿಜೆ) ಹಾಗೂ ರತ್ನಗಳ ಜ್ಯುವೆಲ್ಲರಿ ರಫ್ತು ಉತ್ತೇಜನಾ ಮಂಡಳಿ, ಮುಷ್ಕರವನ್ನು ಕೈಬಿಟ್ಟಿರುವುದಾಗಿ ತಿಳಿದುಬಂದಿದೆ.ಶನಿವಾರ ಈ ಸಂಘಟನೆಗಳ ಪ್ರತಿನಿಧಿಗಳು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News