ಸೂಫಿ ಸಮ್ಮೇಳನದಲ್ಲಿ ಶಾಂತಿಯ ಕರೆ
ಹೊಸದಿಲ್ಲಿ, ಮಾ.21: ದಿಲ್ಲಿಯಲ್ಲಿ ನಡೆದ 4 ದಿನಗಳ ವಿಶ್ವ ಸೂಫಿ ಸಮ್ಮೇಳನದಲ್ಲಿ ಪ್ರಪಂಚಾದ್ಯಂತದ ಖ್ಯಾತ ಸೂಫಿ ನಾಯಕರು ಭಾಗವಹಿಸಿದ್ದು,ಶಾಂತಿ ಹಾಗೂ ಕರುಣೆಗೆ ಏಕ ಕಂಠದ ಕರೆ ನೀಡಿದ್ದಾರೆ. ಕೆನಡ, ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನಗಳ ಸೂಫಿ ನಾಯಕರು ಸಮ್ಮೇಳನದಲ್ಲಿ ಭಯೋತ್ಪಾದನೆ ಹಾಗೂ ಹಿಂಸೆಯನ್ನು ಖಂಡಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ, ಸೂಫಿ ವಿದ್ವಾಂಸರು, ಬುದ್ಧಿಜೀವಿಗಳು ಹಾಗೂ ಶಿಕ್ಷಣ ತಜ್ಞರು ಇಸ್ಲಾಂ ಬೋಧಿಸಿರುವ ಶಾಂತಿ ಸಂದೇಶವನ್ನು ಹರಡುವ ಮಾರ್ಗದ ಕುರಿತು ಚರ್ಚಿಸಿದ್ದಾರೆ.
ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಮ್ಮೇಳನದ ಸಮಾರೋಪ ದಿನದಂದು ಆಲ್ ಇಂಡಿಯಾ ಉಲಮಾ ಹಾಗೂ ಮಶೈಕ್ ಮಂಡಳಿಯ, ದೇಶಾದ್ಯಂತ ಸೂಫಿ ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡುವಂತೆ ಸರಕಾರವನ್ನು ಒತ್ತಾಯಿಸಿದೆ.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಶ್ರಫ್, ದಿಲ್ಲಿ ಹಾಗೂ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಸೂಫಿ ಕೇಂದ್ರಗಳನ್ನು ನಿರ್ಮಿಸುವಂತೆ ತಾವು ಮನವಿ ಮಾಡುತ್ತಿದ್ದೇವೆ. ಇದರಿಂದ ಜನರಿಗೆ ಸೂಫಿ ಪಂಥದ ಬಗ್ಗೆ ಕಲಿಯಲು ಹಾಗೂ ಆಚರಿಸಲು ಸಹಾಯಕವಾಗಲಿದೆ ಎಂದಿದ್ದಾರೆ.
ರಾಷ್ಟ್ರೀಯ ಸಮಗ್ರತೆಯನ್ನು ಬಯಸಿರುವ ಬೇಡಿಕೆಗಳ ಸನದೊಂದನ್ನು ಎಐಯುಎಂಬಿ ಬಿಡುಗಡೆ ಮಾಡಿದೆ. ತನ್ನ 25 ಅಂಶಗಳ ಕಾರ್ಯಸೂಚಿಯಲ್ಲಿ, ಶಾಲೆ ಹಾಗೂ ವಿಶ್ವವಿದ್ಯಾನಿಲಯಗಳಾದ್ಯಂತ, ಎಲ್ಲ ಮಟ್ಟಗಳ ಆಧುನಿಕ ಹಾಗೂ ಧಾರ್ಮಿಕ ಶಿಕ್ಷಣದಲ್ಲಿ ಸೂಫಿ ಪಂಥದ ಬೋಧನೆಗಳನ್ನು ಅಳವಡಿಸುವಂತೆ ಅದು ಒತ್ತಾಯಿಸಿದೆ.
ಸಮ್ಮೇಳನದಲ್ಲಿ ಮಾತನಾಡಿದ ಪಾಕಿಸ್ತಾನಿ-ಕೆನಡಿಯನ್ ವಿದ್ವಾಂಸ ತಾಹಿರುಲ್ ಖಾದ್ರಿ, ಪಾಕಿಸ್ತಾನ ಹಾಗೂ ಭಾರತ ಪರಸ್ಪರ ವೈರಿಗಳಲ್ಲ ಭಯೋತ್ಪಾದನೆಯು ಅವುಗಳ ಸಾಮಾನ್ಯ ಶತ್ರುವಾಗಿದೆ ಎಂದಿದ್ದಾರೆ.
ತಾಲಿಬಾನ್, ಅಲ್-ಖೈದಾ ಹಾಗೂ ಐಸಿಸ್‌ಗಳಂತಹ ಭಯೋತ್ಪಾದಕ ಗುಂಪುಗಳನ್ನು ಖಂಡಿಸಿದ ಸೂಫಿ ನಾಯಕರು, ಕುರ್‌ಆನನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ದೂರವಿರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಸಮ್ಮೇಳನದಲ್ಲಿ, ಇಸ್ಲಾಂನಲ್ಲಿ ಮಹಿಳೆಯ ಹಕ್ಕುಗಳ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲಲಾಯಿತು. ನಾಯಕಿಯರು, ಕಲಾವಿದೆಯರು ಹಾಗೂ ಲೇಖಕಿಯರು ಇಸ್ಲಾಂ ಹಾಗೂ ಶಾಂತಿ ಸಾಧನೆಯಲ್ಲಿ ಮಹಿಳೆಯರ ಪಾತ್ರದ ಕುರಿತು ನಡೆದ ಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದರು.
ಗುರುವಾರ, ವಿಜ್ಞಾನ ಭವನದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಯನ್ನು ಖಂಡಿಸಿದ್ದರು. ಅಲ್ಲಾಹ್‌ಗೆ 99 ಹೆಸರುಗಳಿವೆ. ಆದರೆ, ಅವುಗಳಲ್ಲಿ ಯಾವುದೂ ಭಯೋತ್ಪಾದನೆಯನ್ನು ಪ್ರತಿಪಾದಿಸುವುದಿಲ್ಲ ಎಂದಿದ್ದರು.