ನ್ಯಾಯಾಂಗ ವಶದಲ್ಲಿ ಒ.ಪಿ.ಚೌತಾಲಾ
ಹೊಸದಿಲ್ಲಿ, ಮಾ.21: ಶಿಕ್ಷಕರ ಹಗರಣದಲ್ಲಿ 10 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓ.ಪಿ.ಚೌತಾಲಾ(81) ಅವರನ್ನು ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ತನ್ನ ವಶಕ್ಕೆ ತೆಗೆದುಕೊಂಡಿತು. ಅವರಿಗೆ ಜಾಮೀನು ನೀಡಿದ್ದ ವ್ಯಕ್ತಿ ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ.
ಚೌತಾಲಾಗೆ ಜಾಮೀನು ಸಂದರ್ಭ ಭದ್ರತೆಯನ್ನು ನೀಡಿದ್ದ ಸುರ್ಜಿತ್ ಸಿಂಗ್ ಅವರು ವೈಯಕ್ತಿಕ ಕಾರಣಗಳಿಂದಾಗಿ ತಾನು ಭದ್ರತೆಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಸಂಜಯ್ ಗರ್ಗ್ ಅವರು ಪುರಸ್ಕರಿಸಿ, ನ್ಯಾಯಾಲಯದಲ್ಲಿ ಹಾಜರಿದ್ದ ಚೌತಾಲಾರನ್ನು ಈ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.
ನ್ಯಾಯಾಲಯವು ಪ್ರಸ್ತುತ ಅಕ್ರಮ ಸಂಪತ್ತು ಪ್ರಕರಣದಲ್ಲಿ ಸಿಬಿಐ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.
ಜೆಬಿಟಿ ಹಗರಣ ಪ್ರಕರಣದಲ್ಲಿ 10 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಚೌತಾಲಾ ಸದ್ಯ ಶಿಕ್ಷೆ ಅನುಭವಿಸುತ್ತಿದ್ದು, ಇದು 2000ರಲ್ಲಿ 3,206 ಜೆಬಿಟಿ ಶಿಕ್ಷಕರ ಅಕ್ರಮ ನೇಮಕಕ್ಕೆ ಸಂಬಂಧಿಸಿದೆ.
ಹರ್ಯಾಣದ ಕಾಂಗ್ರೆಸ್ ನಾಯಕ ಶಂಶೇರ್ ಸಿಂಗ್ ಸುರ್ಜೆವಾಲಾ ಅವರ ದೂರಿನ ಮೇರೆಗೆ ಸಿಬಿಐ ಚೌತಾಲಾ,ಪುತ್ರರಾದ ಅಜಯ್ ಮತ್ತು ಅಭಯ್ ವಿರುದ್ಧ ಮೂರು ಪ್ರತ್ಯೇಕ ಅಕ್ರಮ ಸಂಪತ್ತು ಗಳಿಕೆ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು.