×
Ad

ಊಟದ ಬಳಿಕ ತಟ್ಟೆ, ಚಮಚಗಳನ್ನೂ ತಿನ್ನಬಹುದು!

Update: 2016-03-21 23:41 IST

ಹೊಸದಿಲ್ಲಿ,ಮಾ.21: ಊಟವಾದ ಬಳಿಕ ತಟ್ಟೆ, ಚಮಚ ಇತ್ಯಾದಿಗಳ ವಿಲೇವಾರಿ ತಲೆ ತಿನ್ನುತ್ತಿದೆಯೇ..? ಚಿಂತೆಯನ್ನು ಬಿಟ್ಹಾಕಿ. ಪ್ಲಾಸ್ಟಿಕ್ ವಿರೋಧಿ ಕಾರ್ಯಕರ್ತರೋರ್ವರು ಊಟದ ತಟ್ಟೆ, ಚಮಚಗಳು, ಮುಳ್ಳು ಚಮಚ ಮತ್ತು ಚಾಕು ಇತ್ಯಾದಿಗಳನ್ನು ಆವಿಷ್ಕಾರಗೊಳಿಸಿದ್ದು ಊಟವಾದ ಬಳಿಕ ಇವನ್ನೇನು ಮಾಡುವುದೆಂಬ ತಲೆಬಿಸಿ ಬೇಕಿಲ್ಲ...ಇವನ್ನೂ ಕೂಡ ತಿಂದು ಮುಗಿಸಿಬಿಡಿ!

ತ್ಯಾಜ್ಯಗಳಲ್ಲಿ ಸಿಂಹಪಾಲು ಪ್ಲಾಸ್ಟಿಕ್‌ನದೇ ಆಗಿರುವುದನ್ನು ಕಂಡ ನಾರಾಯಣ ಪೀಸಾಪತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಈ ಹೊಸ ಐಡಿಯಾ ಕಂಡುಕೊಂಡಿದ್ದಾರೆ.
ಭಾರತವು ವಾರ್ಷಿಕ 1.2 ಬಿಲಿಯನ್ ಪ್ಲಾಸ್ಟಿಕ್ ಚಮಚಗಳನ್ನು ಬಳಸುತ್ತಿದೆ. ಮಣ್ಣಿನಲ್ಲಿ ಕೊಳೆಯದ ಇದು ಕ್ಯಾನ್ಸರ್‌ಗೆ ಕಾರಣವಾಗಬಲ್ಲುದು,ಜೊತೆಗೆ ಪರಿಸರಕ್ಕೂ ಹಾನಿಕಾರಕವಾಗಿದೆ.
ಚೆನ್ನಾಗಿ ಬೇಯಿಸಿದ ಧಾನ್ಯಗಳು,ಅಜ್ವಾನದಂತಹ ಪರಿಮಳಕಾರಕಗಳು,ಕಲ್ಲುಪ್ಪು ಇತ್ಯಾದಿಗಳನ್ನು ಬಳಸಿಕೊಂಡು ಪೀಸಾಪತಿಯವರು ತಯಾರಿಸಿರುವ ಈ ಕಟ್ಲರಿ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೆ ರುಚಿಕರವೂ ಆಗಿದೆ ಎನ್ನುವುದು ಬಳಕೆದಾರರ ಅಭಿಪ್ರಾಯ.
ಮೂರು ವರ್ಷಗಳಿಗೂ ಅಧಿಕ ಕಾಲ ಕೆಡದೆ ಉಳಿಯಬಲ್ಲ ಈ ಕಟ್ಲರಿ ಸಾಮಾಗ್ರಿಗಳು ಶುಂಠಿ,ಮಿಂಟ್,ಬೆಳ್ಳುಳ್ಳಿ,ಕರಿಮೆಣಸು ಇತ್ಯಾದಿ ಹಲವಾರು ಸ್ವಾದಗಳಲ್ಲಿ ಲಭ್ಯವಿವೆ.
ಇವುಗಳಿಗೆ ಯಾವುದೇ ಲೇಪನವಿಲ್ಲ. ವಾಸ್ತವದಲ್ಲಿ ಇವು ಪೌಷ್ಟಿಕಾಂಶಗಳಿಂದ ಕೂಡಿವೆ. ಉದಾಹರಣೆಗೆ ಚಮಚ ಜೋಳ,ಅಕ್ಕಿ ಮತ್ತು ಗೋಧಿಯ ಮಿಶ್ರಣದಿಂದ ತಯಾರಾಗಿದ್ದು ಯಾವುದೇ ಸಂರಕ್ಷಕವನ್ನು ಸೇರಿಸಲಾಗಿಲ್ಲ. ಇದು ಒಣಗಿದ ತರಕಾರಿಯಿದ್ದಂತೆ ಎಂದು ಪೀಸಾಪತಿ ವಿವರಿಸಿದರು.
ಈ ತಟ್ಟೆಯನ್ನು ಬಿಸಿ ಸೂಪ್‌ನೊಂದಿಗೂ ತಿನ್ನಬಹುದು. ಸಕ್ಕರೆಯನ್ನೂ ಬೆರೆಸಬಹುದು. ತಿನ್ನಲು ಮನಸ್ಸಿಲ್ಲದಿದ್ದರೆ ಬಿಸಾಡಬಹುದು. ಅದು 4-5 ದಿನಗಳಲ್ಲಿ ಕೊಳೆತು ಮಣ್ಣಲ್ಲಿ ಮಣ್ಣಾಗುತ್ತದೆ ಎಂದು ಅವರು ತಿಳಿಸಿದರು.
ನನಗೆ ಇದನ್ನು ನಂಬಲೇ ಸಾಧ್ಯವಾಗಿರಲಿಲ್ಲ. ಮೊದಲ ಬಾರಿಗೆ ನೋಡಿದಾಗ ಕಟ್ಟಿಗೆಯೆಂದೇ ಭಾವಿಸಿದ್ದೆ. ನಾನದನ್ನು ಸಾಂಬಾರಿನೊಂದಿಗೆ ತಿನ್ನುತ್ತೇನೆ,ತುಂಬ ರುಚಿಯಾಗಿರುತ್ತದೆ ಎಂದು ಪೀಸಾಪತಿಯವರ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ ಕಾರ್ಮಿಕನೋರ್ವ ಹೇಳಿದ್ದಾನೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News