ಅರುಣ್ ಜೇಟ್ಲಿಯವರಿಂದ ರಾಷ್ಟ್ರವಾದ ಕಲಿಯುವ ಅಗತ್ಯ ನಮಗಿಲ್ಲ: ಯೆಚೂರಿ
ಕೋಲ್ಕತಾ,ಮಾ.21: ವಿತ್ತ ಸಚಿವ ಅರುಣ್ ಜೇಟ್ಲಿಯವರ ಹೇಳಿಕೆಯನ್ನು ‘‘ಒಂದೋ ನೀವು ನಮ್ಮಿಂದಿಗಿದ್ದೀರಿ ಇಲ್ಲವೇ ಭಯೋತ್ಪಾದಕರೊಂದಿಗಿದ್ದೀರಿ’’ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ಬುಷ್ ಅವರ ಹೇಳಿಕೆಯೊಂದಿಗೆ ಹೋಲಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು, ನಮಗೆ ಬಿಜೆಪಿಯಿಂದ ರಾಷ್ಟ್ರವಾದದ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ರಾಷ್ಟ್ರವಾದದ ಕುರಿತು ಬಿಜೆಪಿಯ ಪ್ರತಿಪಾದನೆ ಜಾರ್ಜ್ ಬುಷ್ ಅವರ ಕುಖ್ಯಾತ ಹೇಳಿಕೆಯನ್ನು ಹೋಲುತ್ತದೆ. ಬಿಜೆಪಿಯನ್ನು ಬೆಂಬಲಿಸುವರೆಲ್ಲ ರಾಷ್ಟ್ರವಾದಿಗಳು, ಅವರನ್ನು ವಿರೋಧಿಸುವವರೆಲ್ಲ ರಾಷ್ಟ್ರವಿರೋಧಿಗಳು.... ಆದರೆ ನಮಗೆ ಬಿಜೆಪಿಯಿಂದ ರಾಷ್ಟ್ರವಾದ ಕಲಿಯಬೇಕಾಗಿಲ್ಲ ಎಂದು ಯೆಚೂರಿ ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ರವಿವಾರ ಬೆಳಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೇಟ್ಲಿ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ರಾಷ್ಟ್ರವಾದ ಜೊತೆಜೊತೆಯಾಗಿ ಸಾಗುತ್ತವೆ. ಸಂವಿಧಾನವು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಸಂಪೂರ್ಣ ಸ್ಯಾತಂತ್ರವನ್ನು ನೀಡಿದೆ, ಆದರೆ ದೇಶದ ವಿನಾಶಕ್ಕಲ್ಲ ಎಂದು ಹೇಳಿದ್ದರು.