ಉವೈಸಿ ವಿರುದ್ಧದ ದೂರು: ಕ್ರಮಾನುಷ್ಠಾನ ವರದಿ ಸಲ್ಲಿಕೆಗೆ ಪೊಲೀಸರಿಗೆ ಆದೇಶ
ಹೊಸದಿಲ್ಲಿ,ಮಾ.22: ದೇಶದ್ರೋಹ ಮತ್ತು ವಿವಿಧ ಗುಂಪುಗಳ ನಡುವೆ ವೈರತ್ವ ಸೃಷ್ಟಿಸುತ್ತಿರುವ ಆರೋಪದಲ್ಲಿ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿರುವ ಕ್ರಿಮಿನಲ್ ದೂರಿನ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಇಲ್ಲಿಯ ಮಹಾನಗರ ನ್ಯಾಯಾಲಯವು ಮಂಗಳವಾರ ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.
ಈ ದೂರಿನಲ್ಲಿ ಸ್ವರಾಜ್ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಬೃಜೇಶ ಚಂದ್ ಶುಕ್ಲಾ ಅವರು,ಮಾ.13ರ ‘ಭಾರತ ಮಾತಾ ಕಿ ಜೈ’ ಕುರಿತು ಉವೈಸಿಯವರ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ ಅವರ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
ತಾನು ತನ್ನ ದೂರನ್ನು ದಿಲ್ಲಿ ಪೊಲೀಸರಲ್ಲಿ ಸಲ್ಲಿಸಿದ್ದು, ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳದ್ದರಿಂದ ತಾನು ನ್ಯಾಯಾಲಯದ ಮೆಟ್ಟಿಲನ್ನೇರಿರುವುದಾಗಿ ಶುಕ್ಲಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಯಾರಾದರೂ ತನ್ನ ಕುತ್ತಿಗೆಯ ಮೇಲೆ ಚೂರಿಯಿಟ್ಟರೂ ತಾನು ಭಾರತ ಮಾತಾ ಕಿ ಜೈ ಎನ್ನುವುದಿಲ್ಲ ಎಂದು ಉವೈಸಿ ಹೇಳಿದ್ದರು.
ಭಾರತ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿರುವುದಕ್ಕಾಗಿ ಉವೈಸಿ ಮತ್ತು ಅವರ ಪಕ್ಷದ ಮಹಾರಾಷ್ಟ್ರ ಶಾಸಕ ವಾರಿಸ್ ಪಠಾಣ್ ವಿರುದ್ಧ ಕಾನೂನು ಕ್ರಮವನ್ನು ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.