ದೇಶದ್ರೋಹಿ ಕಾನೂನಿನ ಮರುಪರಿಶೀಲನೆ ಅಗತ್ಯ
ಹೊಸದಿಲ್ಲಿ, ಮಾ.22: ಜೆಎನ್‌ಯು ವಿವಾದದ ಬಳಿಕ ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ದೇಶದ್ರೋಹಿ ಕಾನೂನಿನ’ ಬಗ್ಗೆ ಪುನರ್‌ಪರಿಶೀಲನೆ ನಡೆಯಬೇಕಾದ ಅಗತ್ಯವಿದೆಯೆಂದು ನೂತನವಾಗಿ ನೇಮಕಗೊಂಡ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಲ್‌ಬೀರ್ ಸಿಂಗ್ ಚೌಹಾಣ್ ಮಂಗಳವಾರ ಅಭಿಪ್ರಾಯಿಸಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟವರ ಅಭಿಪ್ರಾಯಗಳನ್ನು ಆಲಿಕೆ ಮಾಡದೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.
‘‘ವಾಸ್ತವಿಕವಾಗಿ ದೇಶದ್ರೋಹಿ ಕಾನೂನಿನ ಮರುಪರಿಶೀಲನೆಯ ಅಗತ್ಯವಿದೆ. ಈ ಕಾನೂನಿನಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಿಲ್ಲ. ಈ ಕುರಿತು ಸಂಬಂಧಪಟ್ಟವರ ಅಭಿಪ್ರಾಯಗಳನ್ನು ಆಲಿಸಲಿದ್ದೇವೆ ಹಾಗೂ ಕ್ರಿಮಿನಲ್ ನ್ಯಾಯವಾದಿಗಳ ಜೊತೆ ಸಮಾಲೋಚಿಸಲಿದ್ದೇವೆ’’ ಎಂದು ಅವರು ಪಿಟಿಐಗೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ದೇಶದ್ರೋಹದ ಅಪರಾಧಗಳ ಕುರಿತಾದ ಭಾರತೀಯ ದಂಡಸಂಹಿತೆ 124ಎ ಸೆಕ್ಷನ್‌ನಲ್ಲಿ ಇರುವ ಸಮಸ್ಯೆಗಳನ್ನು ತಿಳಿದುಕೊಳ್ಳದೆ, ಇತ್ತೀಚೆಗೆ ಪುನಾರಚಿತವಾಗಿರುವ 21ನೆ ಕಾನೂನು ಆಯೋಗವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲವೆಂದು ಬಲ್‌ಬೀರ್ ಸಿಂಗ್ ತಿಳಿಸಿದ್ದಾರೆ.
ದೇಶದ್ರೋಹಿ ಕಾನೂನು ಮಾತ್ರವಲ್ಲದ ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಕ್ರಿಮಿನಲ್ ದಂಡಸಂಹಿತೆ ಹಾಗೂ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಐಪಿಸಿ) ಹಾಗೂ ಪುರಾವೆ ಕಾಯ್ದೆಯ ಬಗೆಗೂ ಆಯೋಗವು ಮರುಪರಿಶೀಲನೆ ನಡೆಸಲಿದೆಯೆಂದು ಅವರು ಹೇಳಿದ್ದಾರೆ.
ಭಾರತೀಯ ಅಪರಾಧ ದಂಡಸಂಹಿತೆ ಹಾಗೂ ಕ್ರಿಮಿನಲ್ ದಂಡಸಂಹಿತೆಯನ್ನು ಕೇಂದ್ರ ಗೃಹ ಸಚಿವಾಲಯ ನಿರ್ವಹಿಸಲಿದ್ದರೆ, ಪುರಾವೆ ಕಾಯ್ದೆಯು ಕಾನೂನು ಸಚಿವಾಲಯದ ವ್ಯಾಪ್ತಿಯಲ್ಲಿದೆ.
ದೇಶದ್ರೋಹದ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಬಂಧನದ ಬಳಿಕ, ಈ ಕಾನೂನನ್ನು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಬಳಸಲಾಗುತ್ತಿರುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.
ದೇಶದ್ರೋಹದ ಕಾನೂನಿನ ವ್ಯಾಖ್ಯಾನವನ್ನು ವಿಸ್ತೃತಗೊಳಿಸಬೇಕಾದ ಅಗತ್ಯವಿದೆಯೆಂದು ಕೇಂದ್ರ ಸರಕಾರವು ಈ ತಿಂಗಳ ಆರಂಭದಲ್ಲಿ ಒಪ್ಪಿಕೊಂಡಿತ್ತು.