×
Ad

ನನ್ನ ಪಾಕಿಸ್ತಾನ ಪ್ರವಾಸಕ್ಕೆ ಒಮ್ಮೆ ಅಮೆರಿಕ ಹಣ ನೀಡಿತ್ತು:ಹೆಡ್ಲಿ

Update: 2016-03-23 17:49 IST

ಮುಂಬೈ,ಮಾ.23: ತನ್ನ ಪಾಕಿಸ್ತಾನ ಪ್ರವಾಸಕ್ಕೆ ಅಮೆರಿಕವು ಆರ್ಥಿಕ ನೆರವು ನೀಡಿತ್ತು ಎಂದು ಪಾಕ್-ಅಮೆರಿಕನ್ ಭಯೋತ್ಪಾದಕ ಡೇವಿಡ್ ಹೆಡ್ಲಿ ಬುಧವಾರ ಹೇಳಿದ್ದಾನೆ. ಮುಂಬೈ ದಾಳಿಗಳಿಗೆ ಎರಡು ವರ್ಷ ಮುನ್ನ,2006ರವರೆಗೂ ತಾನು ಲಷ್ಕರ್-ಎ-ತೈಯ್ಯಬಾಕ್ಕೆ 70 ಲ.ರೂ.ಗಳ ದೇಣಿಗೆಯನ್ನು ನೀಡಿದ್ದೆ ಎಂದೂ ಆತ ಹೇಳಿಕೊಂಡಿದ್ದಾನೆ.

 1998ರಲ್ಲಿ ತನ್ನ ಬಂಧನದ ನಂತರ ಅಮೆರಿಕದ ಮಾದಕ ದ್ರವ್ಯ ಅನುಷ್ಠಾನ ಪ್ರಾಧಿಕಾರ(ಡಿಇಎ)ವು ತನ್ನ ಪಾಕ್ ಭೇಟಿಗೆ ಹಣಕಾಸು ನೆರವು ಒದಗಿಸಿತ್ತು. ಆಗ ತಾನು ಡಿಇಎ ಜೊತೆ ಸಂಪರ್ಕದಲ್ಲಿದ್ದೆ. ಆದರೆ 1988-1998ರ ಅವಧಿಯಲ್ಲಿ ತಾನು ಡಿಎಇಎಗೆ ಮಾಹಿತಿಯನ್ನೊದಗಿಸುತ್ತಿದ್ದೆ ಅಥವಾ ಅದಕ್ಕೆ ನೆರವಾಗುತ್ತಿದ್ದೆ ಎನ್ನುವುದು ನಿಜವಲ್ಲ ಎಂದು ಅಮೆರಿಕದ ಜೈಲಿನಿಂದ ವೀಡಿಯೊ ಲಿಂಕ್ ಮೂಲಕ ವಿಚಾರಣೆಗೆ ಹಾಜರಾದ ಹೆಡ್ಲಿ ನ್ಯಾಯಾಲಯಕ್ಕೆ ತಿಳಿಸಿದ.

ತಾನು ಲಷ್ಕರ್‌ನಿಂದ ಹಣ ಪಡೆದುಕೊಂಡಿದ್ದೆ ಎನ್ನುವ ವರದಿಗಳನ್ನು ಅಮೆರಿಕದಲ್ಲಿ 35 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ 26/11 ಪ್ರಕರಣದಲ್ಲಿನ ಮಾಫಿ ಸಾಕ್ಷಿ ಹೆಡ್ಲಿ ಅಲ್ಲಗಳೆದ.

 ತಾನು ಲಷ್ಕರ್‌ಗೆ ನೀಡಿದ್ದ ದೇಣಿಗೆ ಯಾವುದೇ ನಿರ್ದಿಷ್ಟ ಕಾರ್ಯಾಚರಣೆಯನ್ನು ಉದ್ದೇಶಿಸಿರಲಿಲ್ಲ ಎಂಂದು ಹೇಳಿದ ಹೆಡ್ಲಿ, ನ್ಯೂಯಾರ್ಕ್‌ನಲ್ಲಿಯ ತನ್ನ ವ್ಯವಹಾರ ಮತ್ತು ಪಾಕಿಸ್ತಾನದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಗಳಿಸಿದ್ದ ಆದಾಯದಲ್ಲಿ ತಾನು ಲಷ್ಕರ್‌ಗೆ ಹಣ ನೀಡಿದ್ದೆ. ಲಷ್ಕರ್‌ಗೆ ತನ್ನ ದೇಣಿಗೆಯ ಬಗ್ಗೆ ತಾನು ಅಮೆರಿಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆನೇ ಎನ್ನುವುದು ತನಗೆ ನೆನಪಿಲ್ಲ ಎಂದು ತಿಳಿಸಿದ.

 ಹೆಡ್ಲಿ ಹೇಳಿಕೆಯ ವಿಶ್ವಾಸಾರ್ಹತೆಯಲ್ಲಿನ ಲೋಪಗಳನ್ನು ಬೆಟ್ಟು ಮಾಡಿದ 26/11 ದಾಳಿಯ ಸಂಚುಕೋರ ಅಬು ಜುಂದಾಲ್ ಪರ ವಕೀಲರು, ಮುಂಬೈ ದಾಳಿಗಳಿಗೆ ಮುನ್ನ ಎರಡು ಸಲ ಅಮೆರಿಕದ ನ್ಯಾಯಾಲಯದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಆತ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮತ್ತು ಅಮೆರಿಕ ಸರಕಾರದೊಂದಿಗಿನ ಕ್ಷಮಾದಾನ ಒಪ್ಪಂದಗಳನ್ನು ಉಲ್ಲಂಘಿಸಿದ್ದ ಎಂದು ವಾದಿಸಿದರು.

 ಮಾದಕ ದ್ರವ್ಯ ಕಳ್ಳ ಸಾಗಣೆ ಆರೋಪದಲ್ಲಿ ಹೆಡ್ಲಿಯನ್ನು 1988 ಮತ್ತು 1998ರಲ್ಲಿ ಅಮೆರಿಕದ ನ್ಯಾಯಾಲಯವು ಅಪರಾಧಿಯೆಂದು ಘೋಷಿಸಿತ್ತು. ಎರಡೂ ಸಂದರ್ಭಗಳಲ್ಲಿ ಈ ಒಪ್ಪಂದಗಳನ್ನು ಮಾಡಿಕೊಂಡು ಲಘುಶಿಕ್ಷೆಯೊಂದಿಗೆ ಆತ ಪಾರಾಗಿದ್ದ.ಪಾಕಿಸ್ತಾನಕ್ಕೆ ತೆರಳಿ ಲಷ್ಕರ್‌ಗೆ ಸೇರುವ ಮೂಲಕ ತಾನು ಕ್ಷಮಾದಾನ ಒಪ್ಪಂದದ ಷರತ್ತನ್ನು ಉಲ್ಲಂಘಿಸಿದ್ದನ್ನು ಹೆಡ್ಲಿ ಇಲ್ಲಿಯ ಸೆಷನ್ಸ್ ನ್ಯಾಯಾಲಯದಲ್ಲಿ ಜುಂದಾಲ್ ವಿರುದ್ಧದ 26/11ರ ಭಯೋತ್ಪಾದನೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ಜಿ.ಎ.ಸನಪ್ ಅವರೆದುರು ಒಪ್ಪಿಕೊಂಡ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಾಸಿಕ್ಯೂಷನ್ ಐದು ದಿನಗಳ ಕಾಲ ಹೆಡ್ಲಿಯನ್ನು ವಿಚಾರಣೆಗೊಳಪಡಿಸಿತ್ತು. ಬಳಿಕ ನ್ಯಾಯಾಲಯವು ಆತನ ಪಾಟೀಸವಾಲಿಗಾಗಿ ಪ್ರಕರಣವನ್ನು ಮುಂದೂಡಿದ್ದು, ಅದು ಇಂದಿನಿಂದ ಪುನರಾರಂಭಗೊಂಡಿದೆ.

ತನ್ನ ಸಹವರ್ತಿ ಹಾಗೂ ಚಿಕಾಗೋದಲ್ಲಿ ವಲಸೆ ವ್ಯವಹಾರವನ್ನು ನಡೆಸುತ್ತಿದ್ದ ತಹವ್ವರ್ ರಾಣಾಗೆ ತಾನು ಲಷ್ಕರ್ ಉಗ್ರ ಎನ್ನುವುದು ಗೊತ್ತಿತ್ತು. ಆತ ಅದನ್ನು ಆಕ್ಷೇಪಿಸಿದ್ದ ಎಂದೂ ಹೆಡ್ಲಿ ನ್ಯಾಯಾಲಯಕ್ಕೆ ತಿಳಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News