ಜಾರ್ಖಂಡ್ ಜಾನುವಾರು ವ್ಯಾಪಾರಿಗಳ ಕಗ್ಗೊಲೆ: ನಾಪತ್ತೆಯಾಗಿರುವ ಬಜರಂಗದಳ ಮುಖಂಡನ ಕೃತ್ಯ ?
ರಾಂಚಿ, ಮಾ. ೨೩ : ಮಾರ್ಚ್ ೧೮ ರಂದು ನಡೆದ ಇಬ್ಬರು ಜಾನುವಾರು ವ್ಯಾಪಾರಿಗಳ ಕಗ್ಗೊಲೆಯ ಸುತ್ತ ಸಂಶಯದ ಹುತ್ತ ಬೆಳೆದಿದೆ. ಈ ಇಬ್ಬರನ್ನು ಕಳ್ಳರು ಕೊಂದು ಹಾಕಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಸ್ಥಳೀಯರು ಪೋಲೀಸರ ಈ ವಾದವನ್ನು ಸ್ವೀಕರಿಸಲು ಸಿದ್ಧರಿಲ್ಲ. ಸಾಂದರ್ಭಿಕ ಸಾಕ್ಷ್ಯಗಳು ಪೋಲೀಸರ ಈ ವಾದವನ್ನು ತಳ್ಳಿಹಾಕುತ್ತಿವೆ.
ಜಾನುವಾರು ಸಂತೆಗೆ ಹೋಗುವ ವ್ಯಾಪಾರಿಗಳ ಕೈಯಲ್ಲಿ ಹೆಚ್ಚು ದುಡ್ಡು ಇರಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಅವರು ಜಾನುವಾರು ಮಾರಿ ವಾಪಸ್ ಬರುತ್ತಿದ್ದವರೂ ಅಲ್ಲ. ಒಂದು ವೇಳೆ ಪೊಲೀಸರು ಹೇಳಿದಂತೆ ಇದು ಕಳ್ಳರ ಕೃತ್ಯವೇ ಆಗಿದ್ದರೆ ಅವರು ಯಾಕೆ ಕೋಣಗಳನ್ನು ಬಿಟ್ಟು ಹೋದರು ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ಸ್ಥಳೀಯರ ಪ್ರಕಾರ ಕೊಲೆಯಾದ ಇಬ್ಬರ ಜೊತೆ ಇನ್ನೊಬ್ಬನೂ ಇದ್ದ. ಆತ ಇವರಿಬ್ಬರಿಗಿಂತ ಸ್ವಲ್ಪ ಅಂತರದಲ್ಲಿ ಬೈಕ್ ಒಂದರಲ್ಲಿ ಹೋಗುತ್ತಿದ್ದ. ಅವನು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂದಿದ್ದಾನೆ. ಇದು ಹೌದಾದರೆ ಅಂದು ಅಲ್ಲಿ ನಿಜವಾಗಿ ಏನಾಯಿತು ಎಂದು ಆತನಿಗೆ ಗೊತ್ತಿರಬೇಕು.
ಈಗ ಬಂಧಿತ ಐವರು ಸಾಕಷ್ಟು ಸ್ಥಿತಿವಂತ, ಗೌರವಯುತ ಕುಟುಂಬದಿಂದ ಬಂದವರು. ಅವರು ಯಾಕೆ ಕಳ್ಳತನಕ್ಕೆ ಇಳಿಯುತ್ತಾರೆ ಎಂಬುದು ಸ್ಥಳೀಯರ ವಾದ. ಆದರೆ ಬಂಧಿತರೆಲ್ಲರೂ ಗೋ ರಕ್ಷಾ ಕ್ರಾಂತಿ ಮಂಚ್ ನೊಂದಿಗೆ ಸಂಬಂಧ ಇರುವವರು. ಹಾಗಾಗಿ ಕೊಲೆಗೆ ಏನು ಕಾರಣ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು.
ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿರುವ ಸ್ಥಳೀಯ ಬಜರಂಗದಳದ ಮುಖಂಡ ಅರುಣ್ ಸಾಹು ಈ ಕಗ್ಗೊಲೆಯಲ್ಲಿ ಭಾಗಿಯಾಗಿರಬೇಕು ಎಂಬ ಸಂಶಯ ಸ್ಥಳೀಯರಿಗಿದೆ. ಇದಕ್ಕೆ ಕಾರಣವೂ ಇದೆ. ಈತನ ವಿರುದ್ಧ ಈಗಾಗಲೇ ಕ್ರಿಮಿನಲ್ ಕೇಸುಗಳಿವೆ. ಗೋ ಸಾಗಾಟದ ಹೆಸರಲ್ಲಿ ಈ ಹಿಂದೆಯೂ ಕೆಲವರ ಮೇಲೆ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದ ಅರುಣ್ ಅಷ್ಟೇ ಬೇಗ ಬಿಡುಗಡೆಗೊಂಡಿದ್ದ. ಈತನನ್ನು ಈವರೆಗೆ ಬಂಧಿಸಲಾಗಿಲ್ಲ.
ಕೃಪೆ :catchnews.com