ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಶೇ.6 ಏರಿಕೆ
Update: 2016-03-23 18:58 IST
ಹೊಸದಿಲ್ಲಿ,ಮಾ.23: ಸರಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ.6ರಷ್ಟು ಹೆಚ್ಚಿಸುವ ಮೂಲಕ ಭರ್ಜರಿ ಹೋಳಿ ಕೊಡುಗೆಯನ್ನು ನೀಡಿದೆ. ಒಂದು ಕೋಟಿಗೂ ಅಧಿಕ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.
ಸರಕಾರದ ಬೊಕ್ಕಸಕ್ಕೆ ವಾರ್ಷಿಕ 14,724.74 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನುಂಟು ಮಾಡಲಿರುವ ಈ ಏರಿಕೆ 2016,ಜ.1ರಿಂದ ಅನ್ವಯಗೊಳ್ಳಲಿದೆ ಎಂದು ಕೇಂದ್ರ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ ಅವರು ತಿಳಿಸಿದರು.
50 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರು ತುಟ್ಟಿಭತ್ಯೆ ಏರಿಕೆಯ ಲಾಭವನ್ನು ಪಡೆಯಲಿದ್ದು, ಅದು ಹಾಲಿ ಶೇ.119ರಿಂದ ಶೇ.125ಕ್ಕೆ ಹೆಚ್ಚಲಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆಯನ್ನು 2015 ಜುಲೈ 1ರಿಂದ ಜಾರಿಗೊಳ್ಳುವಂತೆ ಶೇ.113ರಿಂದ ಶೇ.119ಕ್ಕೆ ಹೆಚ್ಚಿಸಲಾಗಿತ್ತು.