ಉತ್ತರಖಂಡ್‌ನಲ್ಲಿ ಕಾಂಗ್ರೆಸ್ ಶಾಸಕರ ಪಕ್ಷಾಂತರಕ್ಕೆ ರಾಮ್‌ದೇವ್ ಕುಮ್ಮಕ್ಕು
ಡೆಹ್ರಾಡೂನ್, ಮಾ.23: ರಾಜ್ಯದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿನ ಹಿಂದೆ ಯೋಗಗುರು ರಾಮದೇವ್ ಅವರ ಕೈವಾಡವಿದೆಯೆಂದು ಕಾಂಗ್ರೆಸ್ ಪಕ್ಷದ ಉತ್ತರಖಂಡ ಘಟಕವು ಸೋಮವಾರ ಆಪಾದಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಪಕ್ಷಾಂತರಕ್ಕೆ ರಾಮದೇವ್ ಕುಮ್ಮಕ್ಕು ನೀಡುತ್ತಿದ್ದಾರೆಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಿಶೋರ್ ಉಪಾಧ್ಯಾಯ್ ದೂರಿದ್ದಾರೆ.
ಉತ್ತರಖಂಡ್‌ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡೆದ್ದಿರುವ ಭಿನ್ನಮತೀಯ ಕಾಂಗ್ರೆಸ್ ಶಾಸಕರು ಪ್ರತಿಪಕ್ಷ ಬಿಜೆಪಿ ಜೊತೆ ಕೈಜೋಡಿಸಿ ಸರಕಾರದ ಪತನಕ್ಕೆ ಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರ ಪುತ್ರ ಸಾಕೇತ್ ಬಹುಗುಣ ಹಾಗೂ ಪಕ್ಷದ ಜಂಟಿ ಕಾರ್ಯದರ್ಶಿ ಅನಿಲ್ ಗುಪ್ತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 6 ವರ್ಷಗಳ ಅವಧಿಗೆ ಉಚ್ಚಾಟಿಸಿದ ಬಳಿಕ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದೆ.
ಕಾಂಗ್ರೆಸ್ ಶಾಸಕರು ಮಾರ್ಚ್ 18ರಂದು ಹರೀಶ್‌ರಾವತ್ ವಿರುದ್ಧ ಬಂಡಾಯವೇಳುವುದಕ್ಕೆ ಬಹಳ ಸಮಯ ಮೊದಲೇ ರಾಮದೇವ್ ಜೊತೆ ಸಂಪರ್ಕದಲ್ಲಿದ್ದಾರೆಂಬುದ್ನು ತೋರಿಸಲು ತಮ್ಮ ಬಳಿ ಸಾಕಷ್ಟು ಪುರಾವೆಗಳಿವೆಯೆಂದು ಉತ್ತರಾಖಂಡ್ ಕಾಂಗ್ರೆಸ್ ಅಧ್ಯಕ್ಷರು ಆಪಾದಿಸಿದ್ದಾರೆ.
ರಾಮ್‌ದೇವ್ ಬಿಜೆಪಿ ಏಜೆಂಟರ ಹಾಗೆ ಕೆಲಸ ಮಾಡುತ್ತಿದು, ಇತರ ಸಾಧುಗಳೊಂದಿಗೆ ಸೇರಿಕೊಂಡು ಕಾಂಗ್ರೆಸ್‌ಸರಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆಂದು ಅವರು ದೂರಿದ್ದಾರೆ.
ರಾಮದೇವ್ ಮಾತ್ರವಲ್ಲ, ಮಾಧ್ಯಮರಂಗದ ಕೆಲವು ವ್ಯಕ್ತಿಗಳು ಕೂಡಾ ರಾಜ್ಯ ಸರಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಶಾಮೀಲಾಗಿದ್ದಾರೆ. ಅವರ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದೆಂದು ಉಪಾಧ್ಯಾಯ ತಿಳಿಸಿದ್ದಾರೆ.