×
Ad

ಪಾಕಿಸ್ತಾನದಲ್ಲಿ ‘ರಾ’ ಅಧಿಕಾರಿ ಬಂಧನ?

Update: 2016-03-25 23:47 IST

ವಿಭಜನವಾದಿ ಚಟುವಟಿಕೆಗೆ ಭಾರತದ ಕುಮ್ಮಕ್ಕು: ಪಾಕ್

ಬಂಧಿತ ‘ರಾ’ ಅಧಿಕಾರಿಯಲ್ಲ: ಭಾರತ ಸ್ಪಷ್ಟನೆ

ಹೊಸದಿಲ್ಲಿ, ಮಾ.25: ಭಾರತೀಯ ಬೇಹುಗಾರಿಕೆ ಸಂಸ್ಥೆ ‘ರಾ’ದ ಅಧಿಕಾರಿಯೊಬ್ಬರನ್ನು ತಾನು ಬಂಧಿಸಿದ್ದು, ಆತ ಬಲೂಚಿಸ್ತಾನ ಹಾಗೂ ಕರಾಚಿಗಳಲ್ಲಿ ವಿಭನಜವಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿ ದ್ದಾರೆಂದು ಪಾಕಿಸ್ತಾನ ಶುಕ್ರವಾರ ಆಪಾದಿಸಿದೆ.

ಈ ಬಗ್ಗೆ ಅದು ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮೀಶನರ್ ಗೌತಮ್ ಬಿಂಬವಾಲೆ ಅವರನ್ನು ಕರೆಸಿಕೊಂಡು ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ. ‘ರಾ’ ಅಧಿಕಾರಿಯು ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿರುವುದು ಹಾಗೂ ಆತ ಬಲೂಚಿಸ್ತಾನ ಹಾಗೂ ಕರಾಚಿಗಳಲ್ಲಿ ವಿಭಜನವಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಬಗ್ಗೆ ಪಾಕ್ ವಿದೇಶಾಂಗ ಸಚಿವಾಲಯವು, ಭಾರತೀಯ ಹೈಕಮೀಶನರ್ ಅವರಿಗೆ ತನ್ನ ತೀವ್ರ ಪ್ರತಿಭಟನೆ ಹಾಗೂ ಕಳವಳವನ್ನು ವ್ಯಕ್ತಪಡಿಸಿದೆ’’ ಎಂದು ಪಾಕ್ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಕುಲಭೂಷಣ್ ಯಾದವ್ ಎಂಬ ‘ರಾ’ ಅಧಿಕಾರಿಯನ್ನು ಬಂಧಿಸಿರುವುದಾಗಿ ಬಲೂಚಿಸ್ತಾನದ ಗೃಹ ಸಚಿವ ಸರ್ಫರಾಝ್‌ಭುಗ್ತಿ ತಿಳಿಸಿದ್ದಾರೆ. ಬಂಧಿತ ಆರೋಪಿಯು ಭಾರತೀಯ ನೌಕಾ ಪಡೆಯ ಕಮಾಂಡಿಂಗ್ ದರ್ಜೆಯ ಅಧಿಕಾರಿಯಾಗಿದ್ದು, ಆತ ‘ರಾ’ಕ್ಕಾಗಿ ಕೆಲಸ ಮಾಡುತ್ತಿದ್ದರೆಂದು ಅವರು ಹೇಳಿದ್ದಾರೆ. ಕುಲಭೂಷಣ್ ಅವರು ಬಲೂಚಿಸ್ತಾನದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಪ್ರತ್ಯೇಕವಾದಿಗಳು ಹಾಗೂ ಭಯೋತ್ಪಾದಕರ ಜೊತೆ ಸಂಪರ್ಕದಲ್ಲಿದ್ದರೆಂದು ಭುಗ್ತಿ ಆಪಾದಿಸಿದ್ದಾರೆ.

ಆದರೆ ಕುಲ್‌ಭೂಷಣ್ ಎಲ್ಲಿ ಬಂಧಿಸಲಾಯಿತೆಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಆದಾಗ್ಯೂ ಭೂಷಣ್ ಅವರನ್ನು ಅಫ್ಘಾನಿಸ್ತಾನದ ಗಡಿಗೆ ತಾಗಿಕೊಂಡಿರುವ ಬಲೂಚಿಸ್ತಾನದ ಚಮನ್ ಪ್ರದೇಶದಿಂದ ಬಂಧಿಸಲಾಯಿತೆಂದು ಮೂಲಗಳು ತಿಳಿಸಿವೆ. ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ಭಾರತ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೆಂದು ಪಾಕ್ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ. ಆದರೆ ಭಾರತದ ಬೇಹುಗಾರಿಕಾ ಸಂಸ್ಥೆ ರಾದ ಅಧಿಕಾರಿಯೊಬ್ಬನನ್ನು ಬಂಧಿಸಿರುವುದಾಗಿ ಅದು ಹೇಳಿರುವುದು ಇದೇ ಮೊದಲ ಸಲವಾಗಿದೆ.

ಬಂಧಿತ ‘ರಾ’ ಅಧಿಕಾರಿಯಲ್ಲ: ಭಾರತ ಸ್ಪಷ್ಟನೆ

ಹೊಸದಿಲ್ಲಿ, ಮಾ.25: ಪಾಕಿಸ್ತಾನದಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಬಂಧನವಾಗಿರುವುದನ್ನು ಭಾರತ ಸರಕಾರವು ಒಪ್ಪಿಕೊಂಡಿದೆ. ಆದರೆ ಬಂಧಿತ ವ್ಯಕ್ತಿಯು ಬೇಹುಗಾರಿಕೆ ಸಂಸ್ಥೆ ‘ರಾ’ದ ಅಧಿಕಾರಿಯೆಂಬ ಪಾಕಿಸ್ತಾನದ ಆರೋಪವನ್ನು ಅದು ತಳ್ಳಿಹಾಕಿದೆ.

ಬಂಧಿತ ವ್ಯಕ್ತಿಯು ಭಾರತೀಯ ನೌಕಾ ಪಡೆಯಿಂದ ಅವಧಿಪೂರ್ವ ನಿವೃತ್ತಿಯನ್ನು ಪಡೆದುಕೊಂಡಿದ್ದು ಅವರಿಗೆ ಸರಕಾರದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾ ಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಬಂಧಿತ ವ್ಯಕ್ತಿಯನ್ನು ಸಂಪರ್ಕಿಸಲು ಭಾರತೀಯ ರಾಯಭಾರಿ ಕಚೇರಿಗೆ ಅವಕಾಶ ನೀಡ ಬೇಕೆಂದು ಅದು ಪಾಕ್ ಸರಕಾರವನ್ನು ಕೋರಿದೆ.


 ಭಾರತಕ್ಕೆ ಯಾವುದೇ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲು ಆಸಕ್ತಿಯಿಲ್ಲ ಹಾಗೂ ಅದು ಎಲ್ಲರ ಹಿತಾಸಕ್ತಿಯ ದೃಷ್ಟಿಯಿಂದ ಪಾಕಿಸ್ತಾನದಲ್ಲಿ ಸ್ಥಿರತೆ ಹಾಗೂ ಶಾಂತಿಯನ್ನು ಬಯಸುತ್ತದೆ.
 - ಭಾರತದ ವಿದೇಶಾಂಗ ಸಚಿವಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News