ಪುಣೆ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿಲ್ಲ: ಪೊಲೀಸ್
ಪುಣೆ, ಮಾ.25: ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಮಂಗಳವಾರ ‘ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿರಲಿಲ್ಲವೆಂದು ಪೊಲೀಸರಿಂದು ಹೇಳಿದ್ದಾರೆ. ‘ಜೆಎನ್‌ಯುನ ಸತ್ಯ’ ಎಂಬ ಕುರಿತು ಅನೌಪಚಾರಿಕ ಕಾರ್ಯಕ್ರಮದ ವೇಳೆ ಎಬಿವಿಪಿ ಸದಸ್ಯರಿಗೂ ಅಂಬೇಡ್ಕರ್‌ವಾದಿ ವಿದ್ಯಾರ್ಥಿಗಳಿಗೂ ಬಿಸಿ ಬಿಸಿ ವಾಗ್ವಾದ ನಡೆದಿತ್ತು.
ಎಬಿವಿಪಿ ಸದಸ್ಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆಯೆಂದು ಅರೋಪಿಸಿ ಕಾಲೇಜಿನ ಪ್ರಿನ್ಸಿಪಾಲ್ ಆರ್.ಜಿ.ಪರ್ದೇಶಿ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ, ಪತ್ರದಲ್ಲಿದ್ದ ಅಂತಹ ಘೋಷಣೆಗಳ ಕುರಿತಾದ ಉಲ್ಲೇಖ ಬೆರಳಚ್ಚಿನ ಪ್ರಮಾದವೆಂದು ಹೇಳಿ ಅವರು ಪತ್ರವನ್ನು ಹಿಂದೆ ಪಡೆದಿದ್ದರು.
ವಿದ್ಯಾರ್ಥಿ ಘೋಷಣೆಗಳನ್ನು ಕೂಗಿದ್ದಾಗ ತಮ್ಮ ಪೊಲೀಸ್ ಸಿಬ್ಬಂದಿ ಅಲ್ಲಿದ್ದರು. ಅವರ ತನಿಖೆಯಂತೆ ಒಟ್ಟು 29 ಘೋಷಣೆಗಳನ್ನು ಕೂಗಲಾಗಿದೆ. ಅವುಗಳಲ್ಲಿ 14 ಘೋಷಣೆಗಳನ್ನು ಅಂಬೇಡ್ಕರ್ ವಾದಿ ವಿದ್ಯಾರ್ಥಿಗಳ ಗುಂಪು ಕೂಗಿದ್ದರೆ, 15ನ್ನು ಎಬಿವಿಪಿ ಸದಸ್ಯರು ಕೂಗಿದ್ದಾರೆ. ಆದರೆ, ಯಾವುದೇ ಘೋಷಣೆ ದೇಶ ವಿರೋಧಿ ಸ್ವರೂಪದ್ದಾಗಿರಲಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.