ನಮಗೆ ಮತ್ತು ಬಿಜೆಪಿಗೇಕೆ ಪ್ರತ್ಯೇಕ ಮಾನದಂಡ?
ಮುಂಬೈ,ಮಾ.25: ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರ ಹಿಂಸಾಚಾರದ ಬಗ್ಗೆ ಪೊಲೀಸರು ತೋರಿಸಿರುವ ‘ಉದಾರತೆ’ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಪ್ರಶ್ನಿಸಿರುವ ಶಿವಸೇನೆಯು,ಕಾನೂನು ಜಾರಿ ಸಂಸ್ಥೆಗಳು ಪ್ರತ್ಯೇಕ ಮಾನದಂಡಗಳನ್ನು ಬಳಸುತ್ತಿವೆಯೇ ಎಂಬ ಬಗ್ಗೆ ಅವರು ಸ್ಪಷ್ಟನೆಯನ್ನು ನೀಡಬೇಕಾಗಿದೆ ಎಂದು ಹೇಳಿದೆ. ಫರ್ಗ್ಯೂಸನ್‌ನಲ್ಲಿ ಹಿಂಸಾಚಾರ ನಡೆಸಿದವರು ಮುಕ್ತವಾಗಿ ತೆರಳಲು ಅವಕಾಶ ನೀಡಲಾಗಿದೆ. ಮಹಾರಾಷ್ಟ್ರ ವಿರೋಧಿ ಹೇಳಿಕೆಯನ್ನು ನೀಡಿದ್ದಕ್ಕಾಗಿ ‘ಬಿಜೆಪಿ ಮಹಿಳೆ’ಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಶಿವಸೇನೆಯ ಕಾರ್ಯಕರ್ತರನ್ನು ಜೈಲಿಗೆ ತಳ್ಳಲಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಲೇಖನವು ಕಿಡಿ ಕಾರಿದೆ.
ಅಂದ ಹಾಗೆ ಫಡ್ನವೀಸ್ ಅವರು ಗೃಹಖಾತೆಯನ್ನೂ ಹೊಂದಿದ್ದಾರೆ.
ಸೇನೆಯ ಕಾರ್ಯಕರ್ತರ ವಿರುದ್ಧ ದಂಗೆ ಮತ್ತು ಲೂಟಿ ಪ್ರಕರಣಗಳನ್ನು ಜಡಿಯಲಾಗಿದೆ. ಇದಕ್ಕೆ ಗೃಹ ಸಚಿವರೇ ಕುಮ್ಮಕ್ಕು ನೀಡಿದ್ದರು. ಆದರೆ ಫರ್ಗ್ಯೂಸನ್ ಕ್ಯಾಂಪಸ್‌ನಲ್ಲಿ ಹಿಂಸೆಯಲ್ಲಿ ತೊಡಗಿದ್ದವರ ವಿರುದ್ಧ ಈ ಆರೋಪಗಳನ್ನು ಅನ್ವಯಿಸಲಾಗಿಲ್ಲ ಎಂದಿರುವ ಲೇಖನವು,ರಾಜ್ಯದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಪ್ರತ್ಯೇಕ ಶಾಸನವು ಅಸ್ತಿತ್ವದಲ್ಲಿದ್ದರೆ ಹಾಗೆಂದು ಮುಖ್ಯಮಂತ್ರಿಗಳು ನಮಗೆ ತಿಳಿಸಬೇಕು.ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳ ಗಾಳಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಬೀಸತೊಡಗಿದರೆ ಇನ್ನೇನು ಉಳಿಯುತ್ತದೆ ಎಂದು ಪ್ರಶ್ನಿಸಿದೆ.