ದಿಲ್ಲಿ: ರಸ್ತೆ ಕಲಹ
ಹೊಸದಿಲ್ಲಿ, ಮಾ.25: ಇಲ್ಲಿ ವಿಕಾಸಪುರಿಯಲ್ಲಿ ಬುಧವಾರ ಮಧ್ಯರಾತ್ರಿಯ ವೇಳೆ ನಡೆದ ರಸ್ತೆ ಘರ್ಷಣೆಯಲ್ಲಿ 40ರ ಹರೆಯದ ದಂತ ವೈದ್ಯರೊಬ್ಬರನ್ನು 12ಕ್ಕೂ ಹೆಚ್ಚಿನ ಜನರು ಹಾಕಿಸ್ಟಿಕ್ ಹಾಗೂ ಕಬ್ಬಿಣದ ಸರಳುಗಳಿಂದ ಥಳಿಸಿ, ಅವರ ನಿವಾಸದೆದುರು ಕೊಂದಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಇದಕ್ಕೆ ಮೊದಲು ಮೃತ ಪಂಕಜ್ ನಾರಂಗ್ ಹೆಸರಿನ ದಂತ ವೈದ್ಯನಿಗೆ ತಮ್ಮ ಬೈಕನ್ನು ತಾಗಿಸಿದರು. ಆಗ, ಅವರೊಳಗೆ ವಾಗ್ವಾದ ನಡೆದಿತ್ತು.
ಬುಧವಾರ ಮಧ್ಯರಾತ್ರಿ 12:15ರ ವೇಳೆಗೆ ಇಬ್ಬರು ಬೈಕ್ ಸವಾರರು ನಾರಂಗ್‌ರಿಗೆ ವಾಹನವನ್ನು ಒರೆಸಿದ್ದರು. ಆಗ ಅವರು ಸರಿಯಾಗಿ ಬೈಕ್ ಚಲಾಯಿಸುವಂತೆ ಸವಾರರಿಗೆ ಬುದ್ಧಿ ಹೇಳಿದರು. ಆಗ ನಾರಂಗ್ ಹಾಗೂ ಸವಾರರಿಬ್ಬರ ನಡುವೆ ವಾಗ್ವಾದ ಉಂಟಾಯಿತು. ಅವರು, ಬೈಕನ್ನು ವೈದ್ಯರ ಮನೆಯ ಮುಂದೆಯೇ ಬಿಟ್ಟು ತೆರಳಿ, ಹಾಕಿಸ್ಟಿಕ್ ಹಾಗೂ ಕಬ್ಬಿಣದ ಸರಳುಗಳನ್ನು ಹಿಡಿದಿದ್ದ ಇತರ 13 ಮಂದಿಯೊಂದಿಗೆ ಮರಳಿ ಬಂದರೆಂದು ಪೊಲೀಸರು ವಿವರಿಸಿದ್ದಾರೆ.
ಆ ಬಳಿಕ, ದುಷ್ಕರ್ಮಿಗಳ ಗುಂಪು, ನಾರಂಗ್‌ರಿಗೆ ಹಾಕಿಸ್ಟಿಕ್ ಹಾಗೂ ಸರಳುಗಳಿಂದ ಮತ್ತೆ ಮತ್ತೆ ಥಳಿಸಿತು. ಅವರಿಗೆ ತಲೆ ಸಹಿತ ಇಡೀ ಮೈಗೆ ಗಾಯಗಳಾಗಿ ರಕ್ತ ಸುರಿಯ ಹತ್ತಿತು. ಗುಂಪಿನಲ್ಲಿದ್ದ ಜನರ ಸಂಖ್ಯೆ ಹಾಗೂ ಅವರ ಆಕ್ರೋಶಕ್ಕೆ ಅಂಜಿದ ಮನೆಯವರು ಮಧ್ಯಪ್ರವೇಶಿಸಲು ಹಿಂಜರಿದರು.
ದುಷ್ಕರ್ಮಿಗಳು ಅಲ್ಲಿಂದ ತೆರಳಿದ ಬಳಿಕ ಪೊಲೀಸರನ್ನು ಕರೆಸಲಾಯಿತು. ನಾರಂಗ್‌ರನ್ನು ತಕ್ಷಣ ಆಸ್ಪತ್ರೆಗೆ ಒಯ್ಯಲಾಯಿತಾದರೂ, ಅವರಾಗಲೇ ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ಘೋಷಿಸಿದರು.
ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ಎಲ್ಲ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರೆಲ್ಲ ಅದೇ ಪ್ರದೇಶದ ಇ-ರಿಕ್ಷಾ ಚಾಲಕರು ಹಾಗೂ ಮೆಕಾನಿಕ್‌ಗಳಾಗಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.