70000 ಕೋಟಿ ಆಂಧ್ರಕ್ಕೆ ನೀಡಲಿದ್ದಾರೆಯೇ ಚಂದ್ರಶೇಖರ್ ರಾವ್ ?
ಹೈದರಾಬಾದ್ : ಕೆಲವು ತಿಂಗಳ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಮ್ಮ ರಾಜ್ಯ ದೇಶದಲ್ಲೇ ಎರಡನೆಯ ಅತ್ಯಂತ ಶ್ರೀಮಂತ ರಾಜ್ಯವೆಂದು ಕೊಚ್ಚಿಕೊಂಡಿದ್ದೇ ಬಂತು. ಇತ್ತೀಚಿಗಿನ ಬಜೆಟ್ ಅಧಿವೇಶನದಲ್ಲಿ ಅವರು ಶಾಸಕರುಗಳ ವೇತನವನ್ನು 400%ದಷ್ಟು ಏರಿಸಲೂ ಅಸ್ತು ಎಂದರು. ಆದರೆ ಕಳೆದ ವಾರದ ಸುಪ್ರೀಂ ಕೋರ್ಟ್ ತೀರ್ಪೊಂದು ಮಾತ್ರ ತೆಲಂಗಾಣ ಪಾಲಿಗೆ ದೊಡ್ಡ ಆಘಾತವೇ ಸರಿ. ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮೇಲೆ ತೆಲಂಗಣಾ ರಾಜ್ಯವೊಂದಕ್ಕೇ ಸಂಪೂರ್ಣ ಹಕ್ಕಿಲ್ಲ ಹಾಗೂ ಆಂಧ್ರಕ್ಕೂ ಹಕ್ಕಿದೆಯೆಂದು ಕೋರ್ಟ್ ಹೇಳಿತ್ತು. ಒಂದು ಅಂದಾಜಿನ ಪ್ರಕಾರ ಮಂಡಳಿಯ ಒಟ್ಟು ಆಸ್ತಿಯಲ್ಲಿ ಆಂಧ್ರದಪಾಲು ಸುಮಾರು ರೂ. 70,000 ಕೋಟಿಯಷ್ಟಿರಬಹುದು.
ಕಳೆದ ವರ್ಷದ ಜನವರಿಯಲ್ಲಿ ಚಂದ್ರಶೇಖರ್ ರಾವ್ ಅವರು ಆಂಧ್ರ ಪ್ರದೇಶ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದ್ದರು. ತೆಲಂಗಣಾ ರಾಜ್ಯ ಉನ್ನತ ಶಿಕ್ಷಣ ಮಂಡಳಿ ರಚನೆಯಾದ ನಂತರಮೊದಲಿನ ಮಂಡಳಿಯ ಅಗತ್ಯವಿಲ್ಲವೆನ್ನುವುದು ಹಾಗೂ ಅದರ ಆಸ್ತಿಯೆಲ್ಲವೂ ತೆಲಂಗಾಣಗೆ ಸೇರಿದ್ದೆಂಬುದು ಅವರ ಭಾವನೆಯಾಗಿತ್ತು.
ಇದರ ತರುವಾಯ ಆಂಧ್ರ ಪ್ರದೇಶ ಸರಕಾರ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದು ಕಳೆದ ವಾರ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ತೆಲಂಗಣಾ ತನ್ನ ಎಲ್ಲಾ ಆದಾಯ ಹಾಗೂ ಆಸ್ತಿಗಳನ್ನು ಆಂಧ್ರಪ್ರದೇಶದೊಂದಿಗೆ 42 :58 ಅನುಪಾತದೊಂದಿಗೆ ಹಂಚಬೇಕೆಂದು ಕೋರ್ಟ್ ಹೇಳಿದೆ. ಈ ಅನುಪಾತವನ್ನು ಎರಡೂ ರಾಜ್ಯಗಳ ಜನಸಂಖ್ಯೆಯ ಆಧಾರದಲ್ಲಿ ನಿರ್ಧರಿಸಲಾಗಿದೆ.
ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ತೆಲಂಗಾಣ ತಾನು ದೇಶದ ಎರಡನೇ ಅತ್ಯಂತ ಶ್ರೀಮಂತ ರಾಜ್ಯವೆಂದು ಇನ್ನು ಕೊಚ್ಚಿಕೊಳ್ಳುವಂತಿಲ್ಲವೆಂಬುದಂತೂ ಖಚಿತ.