46ನೆ ಸ್ವಾತಂತ್ರೋತ್ಸವ ಆಚರಿಸಿದ ಬಾಂಗ್ಲಾ

Update: 2016-03-26 18:08 GMT

ಢಾಕಾ,ಮಾ.26: ಬಾಂಗ್ಲಾದೇಶವು ಶನಿವಾರ ತನ್ನ 46ನೆ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ, ಸಡಗರಗಳೊಂದಿಗೆ ಆಚರಿಸಿತು. 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ವಿಮೋಚನಾಸಮರದಲ್ಲಿ ಮೃತಪಟ್ಟ ಲಕ್ಷಾಂತರ ಮಂದಿಗೆ ಈ ಸಂದರ್ಭಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜಧಾನಿ ಢಾಕಾದ ಉಪನಗರ ಸವಾರ್‌ನಲ್ಲಿರುವ ರಾಷ್ಟ್ರೀಯ ಸ್ಮಾರಕದಲ್ಲಿ ಇಂದು ಮುಂಜಾನೆಯ ವೇಳೆ ಸಶಸ್ತ್ರ ಪಡೆಗಳು 21 ಕುಶಾಲುತೋಪುಗಳನ್ನು ಹಾರಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದವು. ಸಹಸ್ರಾರು ಬಾಂಗ್ಲಾಪ್ರಜೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗ್ಡೊಂಡಿದ್ದರು. ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಾಮಿದ್ ಹಾಗೂ ಪ್ರಧಾನಿ ಶೇಖ್ ಹಸೀನಾ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನಿರಿಸಿ ಶ್ರದ್ಧ್ದಾಂಜಲಿ ಅರ್ಪಿಸಿದರು.

1971ರ ಬಾಂಗ್ಲಾ ವಿಮೋಚನಾ ಸಮರದ ಹಿರಿಯ ಯೋಧರು ಶುಕ್ರವಾರ ರಾತ್ರಿ ಢಾಕಾದಲ್ಲಿ ರ್ಯಾಲಿಯೊಂದನ್ನು ನಡೆಸಿ, 45 ವರ್ಷಗಳ ಹಿಂದೆ ನಡುರಾತ್ರಿ ನಿರಾಯುಧರಾದ ಹಾಗೂ ಅಮಾಯಕ ಪ್ರಜೆಗಳ ಹತ್ಯಾಕಾಂಡವನ್ನು ‘ಅಂತಾರಾಷ್ಟ್ರೀಯ ನರಮೇಧ ದಿನ’ವಾಗಿ ಆಚರಿಸಬೇಕೆಂದು ಆಗ್ರಹಿಸಿದರು.

ಬಾಂಗ್ಲಾ ಯುದ್ಧದ ದುರಂತದ ನೆನಪಿಗಾಗಿ, ಕಪ್ಪು ಉಡುಪು ಧರಿಸಿದ ಸಹಸ್ರಾರು ಜನರು ರಾಷ್ಟ್ರಧ್ವಜದೊಂದಿಗೆ ಢಾಕಾದ ಶಹೀದ್‌ಮಿನಾರ್‌ನಿಂದ ಸಾವರ್‌ನಲ್ಲಿರುವ ರಾಷ್ಟ್ರೀಯ ಸ್ಮಾರಕದವರೆಗೆ ಪಾದಯಾತ್ರೆ ನಡೆಸಿದರು.

 1971ರ ಸಮರದ ಬಳಿಕ ಬಾಂಗ್ಲಾವು ಭಾರತದ ಸೇನೆಯ ಬೆಂಬಲದೊಂದಿಗೆ ಪಾಕಿಸ್ತಾನದಿಂದ ಸ್ವತಂತ್ರಗೊಂಡು ಪ್ರತ್ಯೇಕ ರಾಷ್ಟ್ರವಾಯಿತು. 9 ತಿಂಗಳುಗಳ ಕಾಲ ನಡೆದ ಈ ಸಂಘರ್ಷದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News