×
Ad

ಯೂರೋಪ್‌ಗಿಂತ ಭಾರತ ಸುಸ್ಥಿತಿಯಲ್ಲಿದೆ: ಪನಗಾರಿಯಾ

Update: 2016-03-26 23:42 IST

ಹೊಸದಿಲ್ಲಿ, ಮಾ.26: ವೈವಿಧ್ಯಮಯ ವಿಷಯಗಳಲ್ಲಿ ಭಾರತ ಹಾಗೂ ಯೂರೋಪಿಯನ್ ಒಕ್ಕೂಟವನ್ನು ತುಲನೆ ಮಾಡಿರುವ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಸಂಘಟಿತ ಘಟಕವಾಗಿ, ಯೂರೋಪಿಯನ್ ಯೂನಿಯನ್‌ಗಿಂತ ಸುಸ್ಥಿತಿಯಲ್ಲಿದೆ. ಮುಂದಿನ ದಶಕಗಳಲ್ಲಿ ಇನ್ನಷ್ಟು ಉನ್ನತ ಪ್ರಗತಿ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತವನ್ನು ಗದ್ದಲದ ಪ್ರಜಾಪ್ರಭುತ್ವ ಎಂದು ಕರೆದಿರುವ ಬಗ್ಗೆ ಬಾರತದ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ ಸಮಾರಂಭದಲ್ಲಿ ಗಮನ ಸೆಳೆದಾಗ, ಭಾರತದಲ್ಲಿ ದೊಡ್ಡ ಪ್ರಮಾಣದ ವೈವಿಧ್ಯತೆ ಇದ್ದರೂ, ವೈವಿಧ್ಯಮಯ ಸಂಪ್ರದಾಯ ಹಾಗೂ ಸಂಸ್ಕೃತಿ ಇದ್ದರೂ ಇಂದಿಗೂ ಸಂಘಟಿತ ಘಟಕವಾಗಿ ಮುಂದುವರಿದಿದೆ ಎಂದು ಹೇಳಿದರು.

ಸಿಂಗಾಪುರದ ಮೊದಲ ಪ್ರಧಾನಿ ಲೀ ಕೌನ್ ಯ್ ಅವರು ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ ಅವರನ್ನು ಭಾರತದ ಗದ್ದಲ ಪ್ರಜಾಪ್ರಭುತ್ವದ ಬಗ್ಗೆ ಕೇಳಿದಾಗ, ಭಗವತಿಯವರು, ನಿಮಗೆ ಅದು ಗದ್ದಲವಾಗಿ ಕೇಳಬಹುದು; ಆದರೆ ನನಗೆ ಅದು ಸಂಗೀತ ಎಂದು ಉತ್ತರಿಸಿದ್ದನ್ನು ಪನಗಾರಿಯಾ ಉಲ್ಲೇಖಿಸಿದರು.

ಇದು ಎಲ್ಲವನ್ನೂ ಹೇಳುತ್ತದೆ. ಆ ಬಗ್ಗೆ ಸ್ವಲ್ಪಯೋಚಿಸಿ. ಯೂರೋಪಿಯನ್ನರು ಭಾರತಕ್ಕಿಂತ ಕಡಿಮೆ ವೈವಿಧ್ಯ ಹೊಂದಿದ್ದರೂ, ಒಂದು ದೇಶವಾಗಲು ಹೆಣಗುತ್ತಿದ್ದಾರೆ. ಯೂರೋಪನ್ನು ಒಂದು ಘಟಕವಾಗಿ ಮಾಡುವ ಚಳವಳಿಯೇ ಹಲವು ಸಂಕಷ್ಟಗಳನ್ನು ತಂದಿವೆ.

ಏಕ ವಿತ್ತೀಯ ಸಂಘಟನೆಯಲ್ಲಿ ಕೂಡಾ, ಗ್ರೀಸ್ ಯಾವ ಸಂದರ್ಭದಲ್ಲಿ ಒಕ್ಕೂಟದಿಂದ ಹೊರ ನಡೆಯುತ್ತದೋ ಅಥವಾ ನಾಳೆ ಸ್ಪೇನ್ ಕೂಡಾ ಅದೇ ಹಾದಿ ಹಿಡಿಯಬಹುದು ಎಂಬ ಭೀತಿ ಕಾಡುತ್ತಿದೆ. ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಅಧಿಕ ವೈವಿಧ್ಯತೆ ಇದ್ದರೂ, ಒಂದು ದೇಶವಾಗಿ ಉಳಿದುಕೊಂಡಿದೆ

ನಾವು ಒಂದಾಗಿ ಇರುವುದಷ್ಟೇ ಅಲ್ಲ; ಕ್ರಮೇಣ ದೇಶ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಇಂದಿನ ಗದ್ದಲದಲ್ಲಿ ನಾವು 1950 ಹಾಗೂ 60ರ ದಶಕವನ್ನು ನಾವು ಮರೆತಿದ್ದೇವೆ. ಆಗ ವಿವಿಧ ಭಾಷೆಗಳನ್ನಾಡುವ ಜನರು ಪ್ರತ್ಯೇಕತಾವಾದ ಚಳವಳಿಯಲ್ಲಿ ತೊಡಗಿದ್ದರು ಎಂದು ಹೇಳಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅಭೂತಪೂರ್ವ ಯಶಸ್ಸು ಸಾಧಿಸುವುದು ಬಿಟ್ಟರೆ ನನಗೆ ಅನ್ಯ ಮಾರ್ಗ ಕಾಣುತ್ತಿಲ್ಲ. ಧೀರ್ಘಾವಧಿಯಲ್ಲಿ ಅಂದರೆ ಮುಂದಿನ 15-30 ವರ್ಷಗಳ ಅವಧಿಯಲ್ಲಿ ದೇಶದ ಅಭಿವೃದ್ಧಿ ದರ ಶೇಕಡ 8ರಿಂದ 10ರ ಆಸುಪಾಸಿನಲ್ಲೇ ಮುಂದುವರಿಯಲಿದೆ. ಭಾರತದಲ್ಲಿ ಅಭಿವೃದ್ಧಿಯಲ್ಲಿ ಎಲ್ಲರ ಸೇರ್ಪಡೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ, ಭಾರತದ ಅಭಿವೃದ್ಧಿಯ ಸ್ವರೂಪವೇ ಭಿನ್ನ ಎಂದರು.

ಈ ಹಿಂದೆ ಸಿಂಗಾಪುರ, ಥೈವಾನ್, ದಕ್ಷಿಣ ಕೊರಿಯಾ ಹಾಗೂ ಚೀನಾದ ಯಶೋಗಾಥೆಗಳು ಕೇಳಿಬರುತ್ತಿದ್ದವು. ಶ್ರಮಸಾಂದ್ರ ಕೈಗಾರಿಕೆಗಳಿಂದ ಇತ್ತೀಚೆಗೆ ಅಭಿವೃದ್ಧಿಯಾಗಿದ್ದರೆ, ಬಳಿಕ ಸೇವಾ ವಲಯದ ಪ್ರಗತಿ ದೇಶದ ಅಭಿವೃದ್ಧಿಗೆ ಪೂರಕವಾಯಿತು ಎಂದು ವಿವರಿಸಿದರು.

ಶ್ರಮಸಾಂಧ್ರ ಕೈಗಾರಿಕಾ ಪ್ರಗತಿಯ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, ನಮ್ಮ ಉದ್ಯಮಿಗಳು ಈ ಕಾರ್ಮಿಕ ವರ್ಗವನ್ನು ಬಳಸಿಕೊಂಡು ಏನು ಮಾಡಬಹುದು ಹಾಗೂ ಯಂತ್ರಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಬೇಕು ಎಂದು ಸೂಚಿಸಿದರು. ಕೇವಲ ಯಂತ್ರಗಳ ಪ್ರಗತಿಗಷ್ಟೇ ಗಮನ ಹರಿಸದೆ, ಶ್ರಮ ಹಾಗೂ ಯಂತ್ರಶಕ್ತಿಯ ಸಮನ್ವಯಕ್ಕೆ ಒತ್ತು ನೀಡುವಂತೆ ಸೂಚಿಸಿದರು. ಭಾರತಕ್ಕೆ ಅಭಿವೃದ್ಧಿ ಅವಕಾಶ ಹೇರಳವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News