×
Ad

ರೇಪ್ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು

Update: 2016-03-26 23:44 IST

ಥಾಣೆ, ಮಾ.26: ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ್ದರಿಂದ ಬೇಸತ್ತ 27ರ ಹರೆಯದ ಮಹಿಳೆಯೊಬ್ಬರು 50 ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಥಾಣೆಯ ಕೋಪಟ್ ಪ್ರದೇಶದ ಸುರೇಖಾ (ಹೆಸರು ಬದಲಿಸಲಾಗಿದೆ) ಈ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ವೈಯಕ್ತಿಕ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಶುಕ್ರವಾರ ಆಕೆ ಕೆಲಸ ಮಾಡುತ್ತಿದ್ದ ಕ್ಷೀರಸಾಗರ ಎಂಬ ಆಸ್ಪತ್ರೆಯ ಮಾಲಕ ಮತ್ತು ವೈದ್ಯ ರೋಹಿತ್ ಗೋಖಲೆ ಎಂಬಾತನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ಮೊದಲು ರಾಬೋಡಿ ಠಾಣೆಗೆ ತೆರಳಿದ್ದರು. ಈ ವೈದ್ಯ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಗರ್ಭಿಣಿಯಾದ ಬಳಿಕ ಕೈಕೊಟ್ಟಿದ್ದಾರೆ ಎನ್ನುವುದು ಆಕೆಯ ಆರೋಪ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ.

ಉದ್ವಿಗ್ನ ಮತ್ತು ಅಸಹಾಯಕ ಸ್ಥಿತಿಯಲ್ಲಿದ್ದ ಆಕೆ ಪೊಲೀಸ್ ಠಾಣೆಗೆ ಹೋಗುವ ಮುನ್ನವೇ 10 ನಿದ್ದೆಗುಳಿಗೆ ಸೇವಿಸಿದ್ದರು. ಸುಸ್ಥಿತಿಗೆ ಬಂದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದರು. ಆದ್ದರಿಂದ ನಾನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದೆ ಎಂದು ಸುರೇಖಾ ವಿವರಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆಗೆ ಮುಂದಿರುವ ಅಡೆ ತಡೆಗಳ ಪರಿಚಯವಾಯಿತು. ಆಕೆ ಆರೋಪ ಮಾಡುತ್ತಿರುವ ವ್ಯಕ್ತಿ ಗಣ್ಯವ್ಯಕ್ತಿಯಾಗಿರುವುದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಬೋಡಿ ಠಾಣೆಯ ಪಿಎಸ್‌ಐ ಬಾವಿಸ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ.

ಆದರೆ ಸುರೇಖಾ ತನ್ನ ಯೋಚನೆಯಂತೆ ಮುಂದುವರಿಯಲು ನಿರ್ಧರಿಸಿದರು. ನಾನು ಮತ್ತೆ ರಬೋಡಿ ಠಾಣೆಗೆ ಭೇಟಿಕೊಟ್ಟೆ. ಈ ಘಟನೆ ಕಪೂರ್‌ಬಾವಡಿ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದರಿಂದ ಅಲ್ಲಿಗೆ ಹೋಗಿ ದೂರು ದಾಖಲಿಸುವಂತೆ ಸೂಚಿಸಿದರು. ಅಲ್ಲಿಗೆ ಹೋದಾಗ ಅಲ್ಲೂ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉತ್ತರ ನೀಡಿ ವಾಪಾಸು ಕಳುಹಿಸಿದರು. ನಾನು ಹೇಳಿದ್ದನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರು ವೈದ್ಯನನ್ನು ರಕ್ಷಿಸಲು ಮುಂದಾದಂತೆ ಕಾಣುತ್ತಿತ್ತು ಎಂದು ಸುರೇಖಾ ಆಪಾದಿಸಿದ್ದಾರೆ.

ಹಲವು ಬಾರಿ ಠಾಣೆಗೆ ಅಲೆದ ಬಳಿಕ, ಹತಾಶೆಯಿಂದ ಸುರೇಖಾ 50 ನಿದ್ದೆಗುಳಿಗೆ ಮತ್ತು 10 ರಕ್ತದ ಒತ್ತಡದ ಗುಳಿಗೆಯನ್ನು ಮಾರ್ಚ್ 20ರಂದು ಸೇವಿಸಿದರು. ತಕ್ಷಣ ಥಾಣೆ ನಾಗರಿಕ ಆಸ್ಪತ್ರೆಗೆ ದಾಖಲಾದ ಅವರನ್ನು ಜೆ.ಜೆ.ಆಸ್ಪತ್ರೆಗೆ ವರ್ಗಾಯಿಸಲಾಯಿತು. ಇದೀಗ ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಶೀಘ್ರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಜೆ.ಜೆ.ಆಸ್ಪತ್ರೆಯ ಡೀನ್ ಡಾ.ಟಿ.ಪಿ.ಲಹಾನೆ ಹೇಳಿದ್ದಾರೆ.

ಥಾಣೆ ನಗರದ ಡಿಸಿಪಿ ಸಚಿನ್ ಪಾಟೀಲ್ ಅವರನ್ನು ಸುರೇಖಾ ಕುಟುಂಬ ಸಂಪರ್ಕಿಸಿ ದೂರು ನೀಡಿದ ಬಳಿಕವಷ್ಟೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News