‘ಭಾರತೀಯ ರಾಯಭಾರ ಕಚೇರಿ ನಮ್ಮ ಸಹಾಯಕ್ಕೆ ಬರಲೇ ಇಲ್ಲ’
ಹೊಸದಿಲ್ಲಿ, ಮಾ.26: ಮೂವತ್ತು ಜನರನ್ನು ಬಲಿ ತೆಗೆದುಕೊಂಡು ಹಲವರನ್ನು ಗಾಯಗೊಳಿಸಿದ ಬಾಂಬ್ ಸ್ಫೋಟ ಬೆಲ್ಜಿಯಂನ ರಾಜಧಾನಿ ಬ್ರಸ್ಸೆಲ್ಸ್ ವಿಮಾನ ನಿಲ್ದಾಣದಲ್ಲಿ ನಡೆದು ಕೆಲವೇ ಕೆಲವು ದಿನಗಳಾಗಿವೆ. ಆದರೆ ಘಟನೆ ನಡೆಯುವ ಅರ್ಧ ಗಂಟೆ ಮೊದಲು ನಿಲ್ದಾಣ ತಲುಪಿದ್ದ ಜೆಟ್ ಏರ್‌ವೇಸ್ ವಿಮಾನದಲ್ಲಿ ಟೊರೆಂಟೋಗೆ ತಮ್ಮ ಸಹೋದರಿಯನ್ನು ನೋಡಲು ಪ್ರಯಾಣಿಸುತ್ತಿದ್ದ ಫಾರ್ಮಾ ಕಂಪೆನಿಯೊಂದರ ಆಡಳಿತ ನಿರ್ದೇಶಕ ಸಂದೀಪ್ ಸಪ್ರ ತಮ್ಮ ಕಹಿ ಅನುಭವವನ್ನು ಫಸ್ಟ್ ಪೋಸ್ಟ್ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದು ಭಾರತೀಯ ರಾಯಭಾರ ಕಚೇರಿ ತಮ್ಮ ಸಹಾಯಕ್ಕೆ ಬರಲೇ ಇಲ್ಲವೆಂದು ದೂರಿದ್ದಾರೆ.
ಸಂದೀಪ್ ತಮ್ಮ ಅನುಭವ ಹೀಗೆ ವಿವರಿಸಿದ್ದಾರೆ: ‘‘ನಾವಿದ್ದ ವಿಮಾನ ಮಾರ್ಚ್ 22ರ ಬೆಳಿಗ್ಗೆ 8 ಗಂಟೆಗೆ ಬ್ರಸ್ಸೆಲ್ಸ್ ವಿಮಾನ ನಿಲ್ದಾಣ ತಲುಪಿದ್ದರೂ ವಿಮಾನವನ್ನು ರನ್-ವೇಯಲ್ಲೇ ಸುರಕ್ಷಾ ಕಾರಣಗಳಿಗಾಗಿ ನಿಲ್ಲಿಸಲಾಗಿತ್ತು. ನಾವು ಅಲ್ಲೇ 45 ನಿಮಿಷ ಕಾಯಬೇಕಾಯಿತು. ಒಂದು ಗಂಟೆಯ ತರುವಾಯ ನಮ್ಮನ್ನು ಒಂದು ತೆರೆದ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಇತರ ವಿಮಾನಗಳ ಪ್ರಯಾಣಿಕರಿದ್ದರು. ಈ ಪ್ರದೇಶ ಸ್ಫೋಟ ನಡೆದ ಸ್ಥಳದ ಹತ್ತಿರದಲ್ಲಿದ್ದು ಆ ಸ್ಥಳವನ್ನು ನಾನು ನೋಡಿದೆ. ಅಲ್ಲಿ ಎಲ್ಲವೂ ಅಲ್ಲೋಲಕಲ್ಲೋಲವಾಗಿತ್ತು. ನಮಗೆ ಬ್ರೆಡ್ ಹಾಗೂ ಕಾಫಿ ನೀಡಲಾಯಿತು. ಮತ್ತೆ ನಮ್ಮನ್ನು ದೊಡ್ಡ ಕಾಂಪ್ಲೆಕ್ಸ್ ಒಂದಕ್ಕೆ ಕರೆದೊಯ್ಯಲಾಯಿತು. ನಮ್ಮ ಹೆಸರು ವಿಳಾಸ ತಿಳಿದುಕೊಂಡು ಪಾಸ್‌ಪೋರ್ಟ್ ನೋಡಿದ ನಂತರ ಆಹಾರ ನೀಡಲಾಯಿತು. ಸುಮಾರು ನಾಲ್ಕರಿಂದ ಐದು ಸಾವಿರ ಜನರಿಗೆ ಕೇವಲ ಏಳೆಂಟು ಶೌಚಾಲಯಗಳು ಅಲ್ಲಿದ್ದವು. ರೆಡ್ ಕ್ರಾಸ್‌ನವರು ಸಹಾಯಕ್ಕಿದ್ದರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಿರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು’’.
‘‘ಮಾರ್ಚ್ 22ರ ರಾತ್ರಿ ಇತರ ಏರ್‌ವೇಸ್ ಅಧಿಕಾರಿಗಳು ಬಂದು ತಮ್ಮ ಪ್ರಯಾಣಿಕರನ್ನು ಕರೆದುಕೊಂಡು ಹೋದರೂ ಜೆಟ್ ಏರ್‌ವೇಸ್ ಸಿಬ್ಬಂದಿ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಜೆಟ್ ಏರ್‌ವೇಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ನನಗೆ ಆನ್‌ಲೈನ್ ಮುಖಾಂತರ ಟ್ಯಾಕ್ಸಿ ಹಾಗೂ ಹೊಟೇಲ್ ಬುಕ್ ಮಾಡುವಂತೆ ತಿಳಿಸಿದರು. ನಾನು ಹಾಗೆಯೇ ಮಾಡಿ ಹೊಟೇಲ್ ಒಂದಕ್ಕೆ ಹೋದೆ. ಅದರೆ ಸಂಜೆಯ ಹೊತ್ತಿಗೆ ಬಸ್ ಏರ್ಪಾಟು ಮಾಡಲಾಗಿದೆಯೆಂದು ಹೇಳಲಾಯಿತು ಹಾಗೂ ನಮ್ಮನ್ನು ಆಮ್‌ಸ್ಟರ್ಡೆಂಗೆ ಕರೆದುಕೊಂಡು ಹೋಗಿ ಅಲ್ಲಿ ಸಣ್ಣ ಹೊಟೇಲೊಂದರಲ್ಲಿರಿಸಲಾಯಿತು’’ ಎಂದು ಅವರು ವಿವರಿಸಿದ್ದು ಭಾರತದ ರಾಯಭಾರ ಕಚೇರಿ ಯಾವತ್ತೂ ನಮ್ಮ ಸಹಾಯಕ್ಕೆ ಬಂದಿರಲಿಲ್ಲ ಹಾಗೂ ಪ್ರಯಾಣಿಕರೆಲ್ಲಾ ನಿರಾಶ್ರಿತರಂತೆ ಕಾಲ ಕಳೆಯಬೇಕಾಗಿತ್ತು ಎಂದಿದ್ದಾರೆ.
‘‘ನಮ್ಮ ಹ್ಯಾಂಡ್‌ಬ್ಯಾಗ್‌ಗಳನ್ನೂ ನಮಗೆ ನೀಡದೆ ಮೂರು ದಿನಗಳ ಕಾಲ ಬ್ರೆಡ್ ಬೆಣ್ಣೆ ತಿಂದು ಬದುಕು ವಂತೆ ಮಾಡಲಾಯಿತು’’ ಎಂದು ಅವರು ಹೇಳಿದರು.