ಮೆಹಬೂಬ ‘ಭಾರತ್ ಮಾತಾಕಿ ಜೈ’ ಹೇಳುತ್ತಾರಾ?
ಹೊಸದಿಲ್ಲಿ, ಮಾ. 26: ಬಿಜೆಪಿ ಹಾಗೂ ಪಿಡಿಪಿ ಮತ್ತೆ ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಸರಕಾರ ರಚಿಸಲು ನಿರ್ಧರಿಸಿವೆ. ಆದರೆ ಈ ಮೈತ್ರಿ ಉಭಯ ಪಕ್ಷಗಳಿಗೆ ಎಷ್ಟು ಮುಳ್ಳಿನ ಹಾದಿಯಾಗಿ ಪರಿವರ್ತನೆಯಾಗಲಿದೆ ಎಂಬುದರ ಝಲಕ್‌ಗಳು ಈಗಲೇ ಕಾಣಲು ಪ್ರಾರಂಭವಾಗಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಆಮ್ ಆದ್ಮಿ ಸರಕಾರದ ಸಚಿವ ಕಪಿಲ್ ಮಿಶ್ರಾ ಅವರು ‘‘ಮುಖ್ಯಮಂತ್ರಿ ಆಗಲಿರುವ ಮೆಹಬೂಬ ಮುಫ್ತಿ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಲು ನಿರಾಕರಿಸಿದರೂ ಅವರ ಜೊತೆ ಮೈತ್ರಿ ಮುಂದುವರಿಸುತ್ತೀರಾ?’’ ಎಂದು ಗಂಭೀರ ಸವಾಲು ಹಾಕಿದ್ದಾರೆ. ಇದಲ್ಲದೆ ಇನ್ನೂ ಮೂರು ಪ್ರಶ್ನೆಗಳನ್ನು ಶಾ ಅವರಿಗೆ ಕೇಳಿದ್ದಾರೆ ಮಿಶ್ರಾ. ಇತ್ತೀಚಿಗೆ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಲು ನಿರಾಕರಿಸಿದ ಶಾಸಕನನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಅವರು ಈ ಪ್ರಶ್ನೆ ಕೇಳಿದ್ದಾರೆ. ‘‘ತಾನು ಕೇಳಿದ ಪ್ರಶ್ನೆಗಳು ವ್ಯಂಗ್ಯ ಧಾಟಿಯಲ್ಲಿದ್ದರೂ ಅವು ಅತ್ಯಂತ ಗಂಭೀರ ಪ್ರಶ್ನೆಗಳಾಗಿವೆ’ ಎಂದು ಮಿಶ್ರಾ ಹೇಳಿದ್ದಾರೆ. ‘ರುಬಯ್ಯಾ ಸಯೀದ್ ಅವರ ಸೋದರಿ ಮೆಹಬೂಬ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ಆಕೆಯನ್ನು ಜಮ್ಮು ಕಾಶ್ಮೀರದ ಮುಂದಿನ ಮುಖ್ಯ ಮಂತ್ರಿಯಾಗಿಸುತ್ತಿದೆ’’ ಎಂದು ಮಿಶ್ರಾ ಪತ್ರದಲ್ಲಿ ಬರೆದಿದ್ದಾರೆ. ರುಬಯ್ಯಾ ಮುಫ್ತಿ ಮುಹಮ್ಮದ್ ಸಯೀದ್ ಅವರ ಕಿರಿಯ ಪುತ್ರಿಯಾಗಿದ್ದು, 1989ರಲ್ಲಿ ಮುಫ್ತಿ ಕೇಂದ್ರ ಗೃಹ ಸಚಿವರಾಗಿದ್ದಾಗ ಆಕೆಯನ್ನು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಅಪಹರಿಸಿತ್ತು. ಐದು ಉಗ್ರರನ್ನು ಬಿಡುಗಡೆ ಮಾಡಿದ ಮೇಲೆ ಆಕೆಯನ್ನು ಬಿಡುಗಡೆ ಮಾಡಿತ್ತು. ‘‘ಮೆಹಬೂಬ ಮುಫ್ತಿ ಅವರಿಗೆ ‘ಭಾರತ್ ಮಾತಾಕಿ ಜೈ’ನಲ್ಲಿ ವಿಶ್ವಾಸವಿದೆಯೇ? ಇಲ್ಲದಿದ್ದರೂ ಆಕೆಯೊಂದಿಗೆ ಸರಕಾರ ರಚಿ ಸಲು ಬಿಜೆಪಿ ಹಿಂದೆ ಸರಿಯುವುದಿಲ್ಲವೇ ? ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಆಕೆ ಇಡೀ ದೇಶದ ಮುಂದೆ ಒಮ್ಮೆ ‘ಅಫ್ಝಲ್ ಗುರು ಒಬ್ಬ ಭಯೋತ್ಪಾದಕ. ಅಫ್ಝಲ್ ಗುರು ಮುರ್ದಾಬಾದ್’’ ಎಂದು ಘೋಷಿಸುವರೇ? ಇಲ್ಲ ಎಂದಾದರೆ ಮತ್ತೆ ಯಾಕೆ ನೀವು ಆಕೆಯೊಂದಿಗೆ ಸರಕಾರ ರಚಿಸಲು ಅಷ್ಟೊಂದು ಉತ್ಸುಕರಾಗಿದ್ದೀರಿ? ಎಂದು ಮಿಶ್ರಾ ಅವರು ಶಾರನ್ನು ಪ್ರಶ್ನಿಸಿದ್ದಾರೆ. ಸಂಸತ್ತಿನ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಝಲ್ ಗುರುಗೆ ಗಲ್ಲು ಶಿಕ್ಷೆಯಾದಾಗ ಆತನಿಗೆ ಕ್ಷಮೆ ನೀಡಬೇಕೆಂದು ಜಮ್ಮು ಕಾಶ್ಮೀರ ಅಸೆಂಬ್ಲಿಯಲ್ಲಿ ತೆಗೆದುಕೊಂಡ ನಿರ್ಣ ಯಕ್ಕೆ ಪಿಡಿಪಿ ಬೆಂಬಲ ನೀಡಿತ್ತು. ‘ಪಾಕಿಸ್ತಾನ ದಿನದಂದು ಕೇಂದ್ರ ಸಚಿವ ರನ್ನು ಮೆಹಬೂಬ ಒತ್ತಡದ ಮೇರೆಗೆ ಪಾಕಿಸ್ತಾನ ರಾಯಭಾರ ಕಚೇರಿಗೆ ಕಳಿಸುವುದರಿಂದ ಜಗತ್ತಿನ ಎದುರು ದೇಶ ದುರ್ಬಲವಾಗಿ ಕಾಣುವುದಿಲ್ಲವೇ?’ ಎಂಬುದು ಮಿಶ್ರಾ ಅವರ ಮೂರನೆ ಪ್ರಶ್ನೆ. ಪಾಕಿಸ್ತಾನದ ತನಿಖಾ ತಂಡವನ್ನು ಪಟ್ಹಾಣ್‌ಕೋಟ್ ದಾಳಿ ಕುರಿತು ತನಿಖೆ ನಡೆಸಲು ಭಾರತಕ್ಕೆ ಬರಲು ಅನುಮತಿ ನೀಡುವಲ್ಲಿ ಮೆಹಬೂಬ ಅವರ ಪಾತ್ರ ಇದೆ ಎಂದಾದರೆ ಭಾರತದ ಮೇಲೆ ದಾಳಿ ಮಾಡಲು ಪಾಕ್ ಸರಕಾರ ಹಾಗೂ ಸೇನೆ ಉಗ್ರರಿಗೆ ತರಬೇತಿ ಹಾಗೂ ಶಸ್ತ್ರಾಸ್ತ್ರ ನೀಡುತ್ತಿವೆ ಎಂದು ಭಾರತ ಈಗ ನಂಬುತ್ತಿಲ್ಲವೇ ಎಂದು ಇಡೀ ಜಗತ್ತು ಪ್ರಶ್ನಿಸುವಂತಾಗಿದೆ. ಒಂದೇ ಏಟಿನಲ್ಲಿ ನೀವು ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ಕುರಿತ ದೇಶದ ಹಲವು ವರ್ಷಗಳ ನಿಲುವನ್ನೇ ನೀವು ದುರ್ಬಲಗೊಳಿಸಿಬಿಟ್ಟಿರಿ’ ಎಂದು ಅವರು ದೂರಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಮೆಹಬೂಬ ಮುಖ್ಯಮಂತ್ರಿಯಾದ ದಿನ ಇಡೀ ದೇಶಕ್ಕೆ ಕಪ್ಪು ದಿನ. ಆ ದಿನ ನಾನು ಒಬ್ಬ ಸಾಮಾನ್ಯ ಭಾರತೀಯ ನಾಗರಿಕನಾಗಿ ನನ್ನ ನಿರಾಶೆ ವ್ಯಕ್ತಪಡಿಸಲು ಕಪ್ಪು ರಿಬ್ಬನ್ ಧರಿಸುತ್ತೇನೆ ಎಂದು ಹೇಳಿರುವ ಮಿಶ್ರಾ ಕೇವಲ ಅಧಿಕಾರಕ್ಕಾಗಿ ಬಿಜೆಪಿ ಬಹುದೊಡ್ಡ ರಾಜಿ ಮಾಡಿಕೊಳ್ಳುತ್ತಿದೆ. ಜಮ್ಮು ಕಾಶ್ಮೀರದ ವಿಷಯದಲ್ಲಿ ಹೀಗೆ ಮಾಡಬಾರದು ಎಂದು ಹೇಳಿದ್ದಾರೆ. .