ಮೈತ್ರಿ ಸರಕಾರವೆಂದರೆ...ನಮ್ಮದು ಅರ್ಧ...ಅವರದು ಅರ್ಧ...!

Update: 2016-03-26 18:52 GMT

‘‘ಸಾರ್...ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮತ್ತೆ ಸರಕಾರ ನಡೆಸುತ್ತದೆಯಂತೆ ಹೌದಾ?’’ ಪತ್ರಕರ್ತ ಕಾಸಿ ಅನುಮಾನದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಲ್ಲಿ ಕೇಳಿದ.

ಅಮಿತ್ ಶಾಗೆ ಸಿಟ್ಟು ಬಂತು ‘‘ಇದರಲ್ಲಿ ಅನುಮಾನ ಯಾಕೇರಿ?’’

 ‘‘ಹಾಗಲ್ಲ ಸಾರ್...ಮುಖ್ಯಮಂತ್ರಿಯಾದರೆ ಮೆಹಬೂಬ ಮುಫ್ತಿಯವರು ಅಫ್ಝಲ್‌ಗುರು ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರಂತೆ ಹೌದಾ?’’ ಮತ್ತೊಂದು ಕುಟುಕು ಪ್ರಶ್ನೆ ಹಾಕಿದ.

‘‘ಯಾರ್ರೀ...ಹಾಗೆಲ್ಲ ಹೇಳಿರೋದು? ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಆಗಿದೆ ಎಂದು, ನಾವು ಅಫ್ಝಲ್‌ಗುರುವನ್ನು ಒಪ್ಪಿಕೊಳ್ಳೋದಕ್ಕೆ ಆಗೋದಿಲ್ಲ ಕಣ್ರೀ...’’

‘‘ಹಾಗಾದ್ರೆ ಮೆಹಬೂಬ ಅವರು ಅಫ್ಝಲ್‌ಗುರು ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸೋದು ಸುಳ್ಳಾ ಸಾರ್?’’ ಕಾಸಿ ಮತ್ತೊಮ್ಮೆ ಕೆದಕಿದ.

ಅಮಿತ್ ಶಾ ತುಸು ಹೊತ್ತು ವೌನವಾದರು. ಒಮ್ಮೆ ಗಡ್ಡ ಸವರಿದರು. ಬಳಿಕ ನಿಧಾನಕ್ಕೆ ತುಟಿ ಬಿಚ್ಚಿದರು ‘‘ನೋಡ್ರಿ ಕಾಶ್ಮೀರದಲ್ಲಿ ಮೈತ್ರಿ ಸರಕಾರ ಜಾರಿಗೆ ಬಂದಿದೆ. ಮೈತ್ರಿ ಅಂದರೆ ಸ್ವಲ್ಪ ಅವರದು, ಸ್ವಲ್ಪ ನಮ್ಮದು. ಈ ನಿಟ್ಟಿನಲ್ಲಿಯೇ ಪ್ರಮಾಣ ವಚನವೂ ನಡೆಯುತ್ತದೆ...’’

‘‘ಅಂದರೆ ಅದು ಹೇಗೆ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡ್ರಿ...ಮೈತ್ರಿ ಅಂದ ಮೇಲೆ ಎಲ್ಲವೂ ನಮ್ಮದೇ ಆಗಿರಬೇಕು ಎಂದು ಹಟ ಹಿಡಿಯುವುದು ತಪ್ಪು. ಆದುದರಿಂದ ಅರ್ಧ ನಮ್ಮದು, ಅರ್ಧ ಅವರದು...ಹಂಚಿಕೊಂಡು ಬಾಳಬೇಕಾಗುತ್ತದೆ...’’

‘‘ಅದೇ ಸಾರ್ ಹೇಗೆ?’’ ಕಾಸಿ ಅರ್ಥವಾಗದೇ ಮತ್ತೆ ಕೇಳಿದ.

‘‘ಅಫ್ಝಲ್‌ಗುರುವಿನ ಹೆಸರಿನಲ್ಲೇ ಪ್ರಮಾಣ ವಚನ ಮಾಡುತ್ತೇನೆ ಎಂದು ಅವರು ಹಟ ಹಿಡಿದರು. ಆದುದರಿಂದ ಸರಕಾರ ರಚನೆ ಸ್ವಲ್ಪ ತಡವಾಯಿತು. ಕೊನೆಗೂ ನಮ್ಮ ಮಾತುಕತೆ ಯಶಸ್ವಿಯಾಯಿತು. ಅವರು ಒಪ್ಪಿದರು...’’ ಅಮಿತ್ ಶಾ ನಿಟ್ಟುಸಿರಿಟ್ಟು ಹೇಳಿದರು.

‘‘ಅಂದರೆ ಅಫ್ಝಲ್‌ಗುರುವಿನ ಹೆಸರಲ್ಲಿ ಅವರು ಪ್ರಮಾಣ ವಚನ ಮಾಡುವುದಿಲ್ಲವೇ?’’

‘‘ಮಾಡುತ್ತಾರೆ ಆದರೆ ಅರ್ಧ ಅವರದು, ಅರ್ಧ ನಮ್ಮದು...’’ ಅಮಿತ್ ಒಗಟಿನ ರೂಪದಲ್ಲಿ ಹೇಳಿದರು.
‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.

‘‘ಅದೇರಿ..ಅವರು ಅಫ್ಝಲ್‌ ಗುರು ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಬಿಜೆಪಿಯ ಭಾಗದಿಂದಲೂ ಒಂದು ಸೇರಿಸಬೇಕು ಎಂದು ನಾವು ಹಟ ಹಿಡಿದೆವು. ಮೆಹಬೂಬ ಅವರು ಅದಕ್ಕೆ ಒಪ್ಪಿಸಿದರು’’ ಅಮಿತ್ ಶಾ ಸಂತೋಷದಿಂದ ಹೇಳಿದರು.

‘‘ಅಂದರೆ ಅಫ್ಝಲ್‌ಗುರು ಮತ್ತು ಅಂಬೇಡ್ಕರ್ ಹೆಸರು ಒಟ್ಟಾಗಿ ಉಚ್ಚರಿಸುತ್ತಾರೆ ಎಂದು ಒಪ್ಪಿಕೊಂಡರೇ?’’ ಕಾಸಿ ಕೇಳಿದ.

‘‘ಹಾಗಲ್ಲ...ಅಫ್ಝಲ್‌ಗುರುವನ್ನು ಸ್ವಲ್ಪ ಮಾರ್ಪಡಿಸಿ ಅಫ್ಝಲ್‌ ಗುರೂಜಿ ಎಂದು ಹೇಳಿ ಎಂಬ ನಮ್ಮ ಬೇಡಿಕೆಗೆ ಮೆಹಬೂಬ ಅವರು ಒಪ್ಪಿದ್ದಾರೆ...’’ ಅಮಿತ್ ಶಾ ಪ್ರಕಟಪಡಿಸಿದರು.

‘‘ಇದರಲ್ಲಿ ಏನು ವ್ಯತ್ಯಾಸ ಆಯಿತು ಸಾರ್? ಅಫ್ಝಲ್‌ ಗುರೂಜಿ ಎಂದು ಆ ಉಗ್ರಗಾಮಿಯನ್ನು ಇನ್ನಷ್ಟು ಗೌರವದಿಂದ ಕರೆದಂತಾಯಿತಲ್ಲ?’’ ಕಾಸಿ ಆತಂಕದಿಂದ ಕೇಳಿದ.

ಅಮಿತ್ ಶಾ ವಿವರಿಸಿದರು ‘‘ಅದು ಹಾಗಲ್ಲ, ಅವರ ಅಫ್ಝಲ್‌ ಮತ್ತು ನಮ್ಮ ಗುರೂಜಿ ಈ ಎರಡು ವ್ಯಕ್ತಿಗಳು ಅಫ್ಝಲ್‌ ಗುರೂಜಿ ಎಂದಾಗುತ್ತದೆ’’
‘‘ಅಂದರೆ...’’ ಕಾಸಿ ಸಂಪೂರ್ಣ ಗೊಂದಲಕ್ಕೊಳಗಾಗಿದ್ದ.

ಅಮಿತ್ ಶಾ ಮತ್ತು ಸಹನೆಯಿಂದ ತಮ್ಮ ಮೈತ್ರಿ ಸರಕಾರದ ಕುರಿತು ವಿವರ ನೀಡಿದರು. ‘‘ನೋಡ್ರಿ ಗುರೂಜಿ ಗೋಳ್ವಾಲ್ಕರ್ ನಮ್ಮ ಪ್ರಾತಃಸ್ಮರಣೀಯರು. ಹಾಗೆಂದು ನಾವು ಬಹಿರಂಗವಾಗಿ ಹೇಳಿದರೆ, ನಾವು ದೇಶದ್ರೋಹಿಗಳಾಗಿ ಬಿಡುವುದಿಲ್ಲವೇ ? ಪಾಪ...ಮೆಹಬೂಬ ಅವರಿಗೆ ಅಫ್ಝಲ್‌ ಗುರು ಪ್ರಾತಃಸ್ಮರಣೀಯರಿರಬಹುದು. ಹಾಗೆಂದು ನಾವು ಸಂಪೂರ್ಣವಾಗಿ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅರ್ಧ ಅಫ್ಝಲ್‌ ಇನ್ನರ್ಧ ನಮ್ಮ ಗುರೂಜಿ. ಒಟ್ಟಿನಲ್ಲಿ ಅಫ್ಝಲ್‌ ಗುರೂಜಿ ಹೆಸರಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರೆ ಮೈತ್ರಿಯ ಒಪ್ಪಂದವನ್ನು ಪಾಲಿಸಿದಂತಾಯಿತಲ್ಲವೇ ? ಅಫ್ಝಲ್‌ಗೂ ಸಮಾಧಾನ. ನಮ್ಮ ಗುರೂಜಿಗೂ ಸಮಾಧಾನ...’’

ಪತ್ರಕರ್ತ ಎಂಜಲು ಕಾಸಿಗೆ ನಿಂತಲ್ಲೇ ತಲೆ ‘ಗಂವ್’ ಎಂದಿತು. ‘‘ಸಾರ್...ಇದು ದೇಶದ್ರೋಹವಾಗುವುದಿಲ್ಲವೇ?’’

ಕಾಸಿ ಇನ್ನಷ್ಟು ಅನುಮಾನದಿಂದ ಕೇಳಿದ.

‘‘ನಮ್ಮ ಗುರೂಜಿ ಜೊತೆಗಿರುವುದರಿಂದ ಇದು ದೇಶದ್ರೋಹವಾಗುವುದಿಲ್ಲ. ಇದನ್ನು ದೇಶದ್ರೋಹ ಎಂದು ಕರೆದವರನ್ನೆಲ್ಲ ದೇಶದ್ರೋಹದ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗುತ್ತದೆ...’’ ಎಂದು ಅಮಿತ್ ಶಾ ಪತ್ರಕರ್ತ ಕಾಸಿಯ ಬಾಯಿ ಮುಚ್ಚಿಸಿದರು.

‘‘ಸಾರ್ ‘ಭಾರತ್ ಮಾತಾ ಕಿ ಜೈ’ ಎಂದು ಮೆಹಬೂಬ ಅವರು ಕೂಗುವ ಭರವಸೆ ನೀಡಿದ್ದಾರೆಯೇ?’’ ಕಾಸಿ ಕೇಳಿದ.

ಅಮಿತ್ ಅದಕ್ಕೂ ಸಿದ್ಧರಾಗಿ ಬಂದಿದ್ದರು. ‘‘ನೋಡ್ರಿ...ಈ ಕುರಿತಂತೆಯೂ ಮೈತ್ರಿ ಸರಕಾರ ರಚನೆ ಮಾಡುವ ಮೊದಲು ಸಾಕಷ್ಟು ಚರ್ಚೆ ಮಾಡಿದೆವು. ಕೊನೆಗೂ ಅವರು ಒಪ್ಪಿಕೊಂಡರು’’ ‘‘ಅಂದರೆ ಅವರು ಭಾರತ್ ಮಾತಾ ಕಿ ಜೈ’’ ಎಂದು ಕೂಗುತ್ತಾರೆಯೆ’’ ಕಾಸಿ ಸಂತಸದಿಂದ ಕೇಳಿದ.

‘‘ಹಾಗಲ್ಲರೀ....ನೋಡ್ರಿ....ನಮ್ಮ ಮೈತ್ರಿಯ ಫಲದಿಂದಾಗಿ ಅವರು ಭಾರತ ಮಾತಾ ಮುರ್ದಾಬಾದ್ ಎಂದು ಕೂಗುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹಾಗೆ ಅವರು ಭರವಸೆ ನೀಡಿದ ಬಳಿಕವೇ ನಾವು ಮೈತ್ರಿ ಸರಕಾರ ರಚನೆಗೆ ಒಪ್ಪಿಕೊಂಡೆವು. ನಮಗೆ ಸರಕಾರ ರಚಿಸುವುದಕ್ಕಿಂತ ದೇಶವೇ ಮುಖ್ಯ. ದೇಶವಿರೋಗಳ ಜೊತೆಗೆ ನಾವು ಯಾವತ್ತೂ ಕೈ ಜೋಡಿಸುವುದಿಲ್ಲ...’’ ಅಮಿತ್ ಶಾ ಕುಳಿತಲ್ಲೇ ಸಣ್ಣಗೆ ಗರ್ಜಿಸಿದರು. ಜೋರಾಗಿ ಗರ್ಜಿಸಿದರೆ ಮೈತ್ರಿ ಸರಕಾರ ಉರುಳಬಹುದು ಎನ್ನುವ ಸಣ್ಣ ಭಯ ಅವರಿಗಿತ್ತು.

‘‘ಅಲ್ಲ ಸಾರ್...ಭಾರತ್ ಮಾತಾ ಕಿ ಜೈ ಎಂದು...’’ ಕಾಸಿ ಬಾಯಿ ತೆರೆಯುವಾಗಲೇ ಅಮಿತ್ ಶಾ ಆತನ ಮಾತಿಗೆ ಅಡ್ಡಗಾಲು ಹಾಕಿದರು.

‘‘ನೋಡ್ರಿ...ಭಾರತ್ ಮಾತಾಕಿ ಜೈ ಎಂದು ಹೇಳದೇ ಇದ್ದರೆ ದೇಶದ್ರೋಹವಲ್ಲ, ಭಾರತ್ ಮಾತಾಕಿ ಮುರ್ದಾಬಾದ್ ಎಂದು ಹೇಳಿದರೆ ದೇಶದ್ರೋಹ. ಭಾರತ್ ಮಾತಾಕಿ ಜೈ ಎನ್ನದಿದ್ದರೆ ದೇಶದ್ರೋಹ ಎಂದಾದರೆ, ಮುಂದೆ...ಹಿಂದೂಸ್ಥಾನ್ ಜಿಂದಾಬಾದ್...ಜೈ ಹಿಂದ್...ಹೀಗೆ ಯಾರು ಯಾವುದನ್ನೆಲ್ಲ ಹೇಳುತ್ತಾರೆ, ಹೇಳುವುದಿಲ್ಲ ಎನ್ನುವುದನ್ನು ಪರೀಕ್ಷೆ ಮಾಡುತ್ತಾ ಹೋಗಬೇಕಾಗುತ್ತದೆ. ಒಟ್ಟಿನಲ್ಲಿ ಅವರು ಮುರ್ದಾಬಾದ್ ಹೇಳದೇ ಇರುವುದೇ ಅವರ ದೇಶಪ್ರೇಮದ ಸಂಕೇತವನ್ನು ಸೂಚಿಸುತ್ತದೆ...’’ ಅಮಿತ್ ಶಾ ಸಮಜಾಯಿಶಿ ನೀಡಿದರು.

‘‘ಹಾಗಾದರೆ ಉವೈಸಿ ದೇಶದ್ರೋಹಿ ಹೇಗಾಗುತ್ತಾರೆ ಸಾರ್?’’ ಕಾಸಿ ಮತ್ತೆ ಗೊಂದಲದಿಂದ ಕೇಳಿದ.

‘‘ಉವೈಸಿ ಬಿಜೆಪಿಯೊಟ್ಟಿ ಮೈತ್ರಿ ಮಾಡಿಕೊಂಡಿದ್ದರೆ, ಹಾಗೆಲ್ಲ ಹೇಳಿಕೆ ನೀಡಬಹುದಿತ್ತು. ಆದರೆ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲವಲ್ಲ...ಆದುದರಿಂದ ಅವರು ಭಾರತ್ ಮಾತಾ ಕಿ ಜೈ ಹೇಳಲೇಬೇಕು...’’ ಅಮಿತ್ ಶಾ ಆದೇಶಿಸಿದರು.

‘‘ಸಾರ್...ಜೆಎನ್‌ಯು ವಿದ್ಯಾರ್ಥಿಗಳು...’’ ಎಂದು ಬಾಯಿ ತೆರೆದದ್ದೇ.....ಅಮಿತ್ ಶಾ ಬೆಚ್ಚಿ ಬಿದ್ದರು...‘‘ಏನ್ರೀ...ಜೆಎನ್‌ಯು ಜೊತೆಗೆ ಸಂಬಂಧ ಹೊಂದಿದೀರೇನ್ರಿ...?ಯಾರಲ್ಲಿ ಈ ದೇಶದ್ರೋಹಿಯನ್ನು ಹಿಡಿದು ಚಚ್ಚಿ’’ ಎಂದದ್ದೇ, ಸುಪ್ರೀಂಕೋರ್ಟ್‌ನ ಆವರಣದಿಂದ ವಕೀಲರ ತಂಡವೊಂದು ದೊಣ್ಣೆ ಕತ್ತಿಯೊಂದಿಗೆ ಹಿಡಿದು ಚಚ್ಚುವುದಕ್ಕೆ ಹೊರಟೇ ಬಿಟ್ಟರು.

Writer - -ಚೇಳಯ್ಯ. chelayya@gmail.com

contributor

Editor - -ಚೇಳಯ್ಯ. chelayya@gmail.com

contributor

Similar News