×
Ad

ಛೋಟಾ ರಾಜನ್‌ವಿರುದ್ಧ ಇನ್ನೆರಡು ಪ್ರಕರಣ

Update: 2016-03-27 23:41 IST

ಹೊಸದಿಲ್ಲಿ, ಮಾ.27: ಶಂಕಿತ ವಿರೋಧಿಗಳ ಹತ್ಯೆ ಹಾಗೂ ಮಹಾರಾಷ್ಟ್ರ ಸರಕಾರದ ಅಧಿಕಾರಿಗಳ ಮನವಿಯಂತೆ ಮುಂಬೈಯ ವ್ಯಾಪಾರಿಯೊಬ್ಬನ ಕೊಲೆ ಯತ್ನಗಳಿಗೆ ಸಂಬಂಧಿಸಿದ ಆರೋಪಗಳಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ವಿರುದ್ಧ ಸಿಬಿಐ ಎರಡು ಹೊಸ ಪ್ರಕರಣಗಳನ್ನು ದಾಖಲಿಸಿದೆ.

ಮೊದಲ ಪ್ರಕರಣವು ಭೆಂಡಿ ಬಝಾರ್ ಗುಂಡು ಹಾರಾಟಕ್ಕೆ ಸಂಬಂಧಿಸಿದುದಾಗಿದೆ. 2010ರ ಫೆಬ್ರವರಿಯಲ್ಲಿ ರಾಜನ್‌ನ ಬಾಡಿಗೆ ಬಂಟರು ಈ ಗುಂಡು ದಾಳಿ ನಡೆಸಿದ್ದರು. ಅದರಲ್ಲಿ, ಶಕೀಲ್ ಮೋಡಕ್ ಹಾಗೂ ಇರ್ಫಾನ್ ಕುರೇಶಿ ಎಂಬಿಬ್ಬರು ಸಾವಿಗೀಡಾಗಿದ್ದರೆ, ಆಸಿಫ್ ದಾಢಿ ಎಂಬಾತ ಗಾಯಗೊಂಡಿದ್ದನು.
ಮೋಡಕ್, ಎಂಎಲ್‌ಸಿ ಹಾಗೂ ಎಂಎಲ್‌ಎ ಆಗಿದ್ದ ಖ್ಯಾತ ರಾಜಕಾರಣಿಯೊಬ್ಬರ ಅತ್ಯಂತ ನಿಕಟವರ್ತಿಯಾಗಿದ್ದನೆನ್ನಲಾಗಿದೆ. ಆತನಿಗೆ ಒಂದು ಮೀನುಗಾರಿಕೆ ದೋಣಿಯಿತ್ತು. ಕುರೇಶಿ ಮುದ್ರಣಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ದಾಢಿ, ಅಕ್ರಮ ಚಟುವಟಿಕೆಗಳಿಗಾಗಿ ಮುಂಬೈ ಪೊಲೀಸರ ಹದ್ದುಗಣ್ಣಿನಲ್ಲಿದ್ದನಾದರೂ, ಬಳಿಕ ಸಕ್ಷಮ ನ್ಯಾಯಾಲಯವು ಆತನನ್ನು ದೋಷಮುಕ್ತಗೊಳಿಸಿತ್ತು.
ಕೊಲೆಗೆ ಸಂಬಂಧಿಸಿ ಐಪಿಸಿಯ ವಿವಿಧ ಕಲಮುಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯನ್ವಯ ನಾಲ್ವರು ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಸಿಬಿಐ ಮೂಲಗಳು ತಿಳಿಸಿವೆ.
ಎರಡನೆಯ ಪ್ರಕರಣವು, ರಾಜನ್‌ನೊಂದಿಗೆ ಸಂಬಂಧ ಹೊಂದಿದ್ದ ಇಬ್ಬರು ಮೋಟರ್ ಸೈಕಲ್ ಸವಾರ ಶೂಟರ್‌ಗಳು 2012ರ ಅಕ್ಟೋಬರ್‌ನಲ್ಲಿ ಮುಂಬೈ ಮೂಲದ ವ್ಯಾಪಾರಿ ಹಾಗೂ ಹೋಟೆಲ್ ಮಾಲಕ ಬಿ.ಆರ್.ಶೆಟ್ಟಿ ಎಂಬವರ ಹತ್ಯೆಗೆ ಪ್ರಯತ್ನ ನಡೆಸಿದುದಕ್ಕೆ ಸಂಬಂಧಿಸಿದ್ದಾಗಿದೆಯೆಂದು ಅವು ಹೇಳಿವೆ.
ಅಮ್ರೋಲಿ ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನೀಗ ಸಿಬಿಐ ಕೈಗೆತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News