ಹಣ ಪಡೆಯುವಂತೆ ಮತದಾರರಿಗೆ ಚಿತಾವಣೆ
ತಿರುನೆಲ್ವೇಲಿ, ಮಾ.27: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡಲು ಡಿಎಂಕೆ ಹಾಗೂ ಎಡಿಎಂಕೆಗಳಿಂದ ಹಣ ಪಡೆಯುವಂತೆ ಮತದಾರರನ್ನು ಪ್ರಚೋದಿಸುತ್ತಿದ್ದ ಆರೋಪದಲ್ಲಿ ಡಿಎಂಡಿಕೆ ಪಕ್ಷದ ಸ್ಥಾಪಕ ವಿಜಯಕಾಂತ್ ಪತ್ನಿ ಹಾಗೂ ಪಕ್ಷದ ಮಹಿಳಾ ಘಟಕದ ನಾಯಕಿ ಪ್ರೇಮಲತಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗೆ ಪ್ರೇಮಲತಾ ಸಾರ್ವಜನಿಕ ಸಭೆಯೊಂದರಲ್ಲಿ ಮಾಡಿದ್ದ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ.
ಸ್ಥಳೀಯ ಎಡಿಎಂಕೆ ಕಾರ್ಯಕರ್ತನೊಬ್ಬ ಚುನಾವಣಾಧಿಕಾರಿಗಳಲ್ಲಿ ದಾಖಲಿಸಿದ್ದ ದೂರು ಹಾಗೂ ಸಭೆಯಲ್ಲಿ ಪ್ರೇಮಲತಾ ಮಾಡಿದ್ದ ಭಾಷಣದ ಮುದ್ರಿಕೆಯೊಂದಿಗೆ ಅಧಿಕಾರಿಗಳು ನೀಡಿರುವ ವರದಿಯ ಆಧಾರದಲ್ಲಿ ಅವರ ವಿರುದ್ಧ ಜನಪ್ರಾತಿನಿಧ್ಯ ಕಾಯ್ದೆ ಹಾಗೂ ಐಪಿಸಿಯನ್ವಯ ಪ್ರಕರಣ ದಾಖಲಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಪ್ರೇಮಲತಾ ''ಕೆಲವು ರಾಜಕೀಯ ಪಕ್ಷಗಳು ಒಂದು ಮತಕ್ಕೆ ರೂ.2ರಿಂದ 3 ಸಾವಿರದವರೆಗೆ ನೀಡುತ್ತವೆ. ನೀವು ವೋಟೊಂದಕ್ಕೆ ರೂ.1ಲಕ್ಷ ಕೇಳಿ'' ಎಂಬುದಾಗಿ ಡಿಎಂಕೆ ಹಾಗೂ ಎಡಿಎಂಕೆಗಳನ್ನು ತೀಕ್ಷ್ಣವಾಗಿ ಉಲ್ಲೇಖಿಸುತ್ತ ಸಭಿಕರಿಗೆ ಹೇಳಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ.
ಮೇ.16ರಂದು ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಡಿಎಂಡಿಕೆ ನಾಲ್ಕು ಪಕ್ಷಗಳ ಪಿಡಬ್ಲುಎಫ್‌ನೊಂದಿಗೆ ಮೈತ್ರಿಯಲ್ಲಿ ಕಣಕ್ಕಿಳಿಯಲಿದೆ. ವಿಜಯಕಾಂತ್‌ಈ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದಾರೆ.