ಅಂಬಾನಿ, ಖೇರ್, ಸೈನಾಗೆ ಪದ್ಮ ಪ್ರಶಸ್ತಿ ಪ್ರಧಾನ
ಹೊಸದಿಲ್ಲಿ, ಮಾ.28: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ದಿವಂಗತ ಧೀರೂಬಾಯಿ ಅಂಬಾನಿ, ಮಾಜಿ ರಾಜ್ಯಪಾಲ ಜಗ್ಮೋಹನ್, ನಟ ಅನುಪಮ್ ಖೇರ್, ಅಜಯ್ ದೇವಗನ್ ಹಾಗೂ ಬ್ಯಾಂಡ್ಮಿಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸೋಮವಾರ ಪದ್ಮಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ, ಖ್ಯಾತ ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ, ಮಾಜಿ ಸಿಎಜಿ ವಿನೋದ್ ರಾಯ್, ಗಾಯಕಿ ಮಾಲಿನಿ ಅವಸ್ಥಿ, ಕೃಷಿ ಸಂತ ಸುಬಾಷ್ ಪಾಳೇಕರ್, ಖ್ಯಾತ ಬಾಣಸಿಗ ಮುಹಮ್ಮದ್ ಇಮ್ತಿಯಾಝ್ ಖುರೇಶಿ ಸೇರಿದಂತೆ 58 ಮಂದಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶಸ್ತಿ ಪ್ರಧಾನ ಮಾಡಿದರು.
ಕೋಕಿಲಾಬೆನ್ ಅಂಬಾನಿ ಅವರು ಪತಿಗೆ ಮರಣೋತ್ತರವಾಗಿ ನೀಡಿರುವ ಪದ್ಮವಿೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಕುಟುಂಬದ ನಿಕಟ ಸದಸ್ಯರು ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಉಪಸ್ಥಿತರಿದ್ದರು.
ಅಂಬಾನಿ ಹೊರತಾಗಿ ಅಮೆರಿಕದಲ್ಲಿರುವ ಅರ್ಥಶಾಸ್ತ್ರಜ್ಞ ಅವಿನಾಶ್ ಕಮಲಾಕರ ದೀಕ್ಷಿತ್, ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಜಗ್ಮೋಹನ್, ಶಾಸ್ತ್ರೀಯ ಸಂಗೀತ ದಿಗ್ಗಜರಾದ ಯಾಮಿನಿ ಕೃಷ್ಣಮೂರ್ತಿ ಹಾಗೂ ರವಿಶಂಕರ್ ಅವರನ್ನು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪದ್ಮೂಷಣ ಸ್ವೀಕರಿಸಿದವರಲ್ಲಿ ವಾಸ್ತುಶಿಲ್ಪಿ ಹಫೀಝ್ ಸೊರಾಬ್, ಅಜಿತ್ ಗ್ರೂಪ್ ಆಫ್ ನ್ಯೂಸ್ ಪೇಪರ್ಸ್‌ನ ಪ್ರಧಾನ ಸಂಪಾದಕ ಬರ್ಜೀಂದರ್ ಸಿಂಗ್ ಹಂದ್ರಾದ್, ಬಾಲಿವುಡ್ ನಟ ಅನುಪಮ್ ಖೇರ್, ಉದ್ಯಮಿ ಪಲ್ಲೋಂಜಿ ಶಾಪೂರ್‌ಜಿ ಮಿಸ್ತ್ರಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮಾಜಿ ಸಿಎಜಿ ವಿನೋದ್ ರಾಯ್, ಖ್ಯಾತ ವಿಜ್ಞಾನಿ ಅಲ್ಲಾ ವೆಂಕಟರಾಮ ರಾವ್ ಹಾಗೂ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟೆರಾಲಜಿಯ ಅಧ್ಯಕ್ಷ ದುವ್ಯೆರು ನಾಗೇಶ್ವರ ರೆಡ್ಡಿ ಸೇರಿದ್ದಾರೆ.
ಐದು ಮಂದಿಗೆ ಪದ್ಮವಿಭೂಷಣ, ಎಂಟು ಮಂದಿಗೆ ಪದ್ಮಭೂಷಣ ಹಾಗೂ 43 ಮಂದಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಾಡಲಾಯಿತು.