×
Ad

ವಿಮಾನ ಅಪಹರಣಕಾರನಿಗೆ ನ್ಯಾಯಾಂಗ ಬಂಧನ

Update: 2016-03-30 23:49 IST

ಲರ್ನಕ (ಸೈಪ್ರಸ್), ಮಾ. 30: ನಕಲಿ ಆತ್ಮಹತ್ಯಾ ಬೆಲ್ಟ್ ಧರಿಸಿ ಈಜಿಪ್ಟ್‌ಏರ್ ವಿಮಾನವೊಂದನ್ನು ಸೈಪ್ರಸ್‌ಗೆ ಅಪಹರಿಸಿದ ಆರೋಪದಲ್ಲಿ ಬಂಧಿತನಾಗಿರುವ ಈಜಿಪ್ಟ್ ವ್ಯಕ್ತಿಯನ್ನು ಸೈಪ್ರಸ್‌ನ ನ್ಯಾಯಾಲಯವೊಂದು ಬುಧವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಸೈಪ್ರಸ್ ಮತ್ತು ಈಜಿಪ್ಟ್ ಅಧಿಕಾರಿಗಳು ಆರೋಪಿಯನ್ನು 59 ವರ್ಷದ ಸೈಫ್ ಅಲ್ದಿನ್ ಮುಸ್ತ್ತಫ ಎಂಬುದಾಗಿ ಗುರುತಿಸಿದ್ದಾರೆ.
ಆತ ಮಂಗಳವಾರ ಈಜಿಪ್ಟ್‌ನ ಅಲೆಕ್ಸಾಂಡ್ರಿಯ ನಗರದಿಂದ ಕೈರೋಗೆ 72 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಹಾರುತ್ತಿದ್ದ ವಿಮಾನವನ್ನು ಮೆಡಿಟರೇನಿಯನ್ ದ್ವೀಪ ರಾಷ್ಟ್ರ ಸೈಪ್ರಸ್‌ಗೆ ಅಪಹರಿಸಿ ಅಲ್ಲಿನ ಲರ್ನಕ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದ್ದ.
ಅಂತಿಮವಾಗಿ ಆರು ಗಂಟೆಗಳ ಬಿಕ್ಕಟ್ಟಿನ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದನು ಹಾಗೂ ಅಪಹರಣ ಪ್ರಕರಣ ಸುಖಾಂತ್ಯವಾಗಿತ್ತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದರು.
ಮುಸ್ತಾಫ ‘‘ಮಾನಸಿಕ ಅಸ್ಥಿರ’’ ವ್ಯಕ್ತಿ ಎಂಬುದಾಗಿ ಬಣ್ಣಿಸಿರುವ ಸೈಪ್ರಸ್ ಅಧಿಕಾರಿಗಳು, ಈ ಪ್ರಕರಣ ಭಯೋತ್ಪಾದನೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.
ಅಪಹರಣದ ಹಿಂದಿನ ಆತನ ಉದ್ದೇಶ ವೈಯಕ್ತಿಕವಾದುದಾಗಿತ್ತು ಎಂದು ಸೈಪ್ರಸ್ ಅಧಿಕಾರಿಗಳು ಹೇಳಿದ್ದಾರೆ. ತನ್ನ ಸೈಪ್ರಸ್‌ನ ಮಾಜಿ ಹೆಂಡತಿಯೊಂದಿಗೆ ಸಂಬಂಧ ಹಳಸಿದ ಹತಾಶೆಯಲ್ಲಿ ಆತ ವಿಮಾನವನ್ನು ಅಪಹರಿಸಿದ್ದಾನೆ ಎಂದು ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News