×
Ad

ನಾವಿಕನ ಬಿಡುಗಡೆಗೆ ಆದೇಶ ನೀಡಿ: ಹೇಗ್‌ನಲ್ಲಿ ಇಟಲಿ ಮನವಿ

Update: 2016-03-30 23:53 IST

 ಹೇಗ್, ಮಾ. 30: ಬಂಧನದಲ್ಲಿರುವ ಇಟಲಿಯ ನೌಕಾಪಡೆ ಸೈನಿಕನೊಬ್ಬನನ್ನು ಬಿಡುಗಡೆಗೊಳಿಸುವಂತೆ ಭಾರತಕ್ಕೆ ಆದೇಶ ನೀಡುವಂತೆ ಇಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಇಟಲಿ ಬುಧವಾರ ಮನವಿ ಮಾಡಿದೆ.
ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಐರೋಪ್ಯ ಒಕ್ಕೂಟ-ಭಾರತ ಶೃಂಗಸಭೆ ಆರಂಭಗೊಳ್ಳುವ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಇಟಲಿಯೊಂದಿಗೆ ಹೊಂದಿರುವ ದೀರ್ಘಕಾಲೀನ ವಿವಾದವನ್ನು ಬಗೆಹರಿಸುವ ಗುರಿಯನ್ನು ಹೊಂದಿದ್ದಾರೆ.
2012ರಲ್ಲಿ ತೈಲ ಟ್ಯಾಂಕರೊಂದಕ್ಕೆ ಬೆಂಗಾವಲಾಗಿ ಬಂದಿದ್ದ ಇಬ್ಬರು ಇಟಲಿ ನೌಕಾಪಡೆಯ ಸೈನಿಕರು ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರು ಎಂಬುದಾಗಿ ತಪ್ಪು ತಿಳಿದು ಕೊಂದಿದ್ದಾರೆಂದು ಆರೋಪಿಸಲಾಗಿತ್ತು. ಬಳಿಕ ಅವರನ್ನು ಭಾರತೀಯ ನೌಕಾಪಡೆಯು ಬಂಧಿಸಿತ್ತು. ಅವರ ವಿರುದ್ಧ ಯಾವುದೇ ಆರೋಪ ಹೊರಿಸಿಲ್ಲವಾದರೂ, ಅವರು ಭಾರತ ಬಿಟ್ಟು ಹೋಗದಂತೆ ನಿರ್ಬಂಧಿಸಲಾಗಿತ್ತು.
ಅವರ ಪೈಕಿ ಮಸಿಮಿಲಿಯಾನೊ ಲಾಟೋರ್ ಎಂಬಾತನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಇಟಲಿಗೆ ಹಿಂದಿರುಗಲು 2015ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ, ಸಾಲ್ವಟೋರ್ ಗಿರೋನ್ ನಾಲ್ಕು ವರ್ಷಗಳಿಂದಲೂ ದಿಲ್ಲಿಯಲ್ಲೇ ಇದ್ದಾನೆ. ಆತ ದಿಲ್ಲಿಯಲ್ಲಿರುವ ಇಟಲಿ ರಾಯಭಾರ ಕಚೇರಿಯಲ್ಲಿ ವಾಸಿಸುತ್ತಿದ್ದು ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕಾಗಿದೆ.
ಎಲ್ಲ ದೇಶಿ ನ್ಯಾಯಾಂಗ ಕಲಾಪಗಳನ್ನು ಕೈಬಿಡಲು ಭಾರತ ಮತ್ತು ಇಟಲಿಗಳು ಒಪ್ಪಿದ ಬಳಿಕ ಪ್ರಕರಣವು ಹೇಗ್‌ನಲ್ಲಿರುವ ಖಾಯಂ ಪಂಚಾಯಿತಿ ನ್ಯಾಯಾಲಯಕ್ಕೆ ಸ್ಥಳಾಂತರಗೊಂಡಿತ್ತು.
ಹೇಗ್‌ನಲ್ಲಿನ ವಿಚಾರಣೆ ನಿಧಾನ ಗತಿಯಲ್ಲಿ ಸಾಗುವ ಕಾರಣ, ಪ್ರಕರಣ ಇತ್ಯರ್ಥಗೊಳ್ಳಲು 8 ವರ್ಷಗಳಾದರೂ ಬೇಕಾಗಬಹುದು. ಗಿರೋನ್ ತನ್ನ ಹೆಂಡತಿ ಮತ್ತು ಸಣ್ಣ ಮಕ್ಕಳನ್ನು ಬಿಟ್ಟು ಸಾವಿರಾರು ಕಿಲೋಮೀಟರ್ ದೂರದಲ್ಲಿ ವಾಸಿಸಬೇಕಾಗಿದೆ ಎಂದು ಇಟಲಿಯ ವಕೀಲರು ವಿಶ್ವಸಂಸ್ಥೆಯ ನ್ಯಾಯಮಂಡಳಿಗೆ ನಿವೇದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News