ಮನೆ ಬಾಗಿಲಿಗೇ ಬಂದು ಶಿಕ್ಷಣ ನೀಡುವ ಶಿಕ್ಷಣಾಧಿಕಾರಿ: ಜಿ.ಎನ್. ಶಶಿಧರ್

Update: 2016-03-30 18:44 GMT

ನಿಮ್ಮ ಮನೆಯಲ್ಲಿ ಎಸೆಸೆಲ್ಸಿ ಓದುತ್ತಿರುವ ಮಗುವೊಂದಿದೆ ಎಂದು ಊಹಿಸಿಕೊಳ್ಳಿ.ಆದರೆ ಯಾಕೋ ಏನೋ ಆ ಮಗು ಕಲಿಕೆಯಲ್ಲಿ ಕೊಂಚ ಹಿಂದುಳಿದಿದೆ ಎಂದು ಭಾವಿಸೋಣ. ಮಧ್ಯವಾರ್ಷಿಕ ರಜೆ ಕಳೆದು ಶಾಲೆ ಪುನರಾರಂಭಗೊಳ್ಳುತ್ತಿದ್ದಂತೆ ಅದೊಂದು ದಿನ ಇನ್ನೇನು ಬೆಳಕು ಹರಿಯುವ ಮುಂಚೆಯೇ ನಿಮ್ಮ ಮನೆಯ ಬಾಗಿಲನ್ನು ಯಾರೋ ಬಡಿಯುತ್ತಾರೆ. ಚಳಿಗಾಲದ ಮುಂಜಾನೆಯ ಸಿಹಿನಿದ್ದೆಯಿಂದೆದ್ದು ಬಾಗಿಲು ತೆರೆದು ನೋಡಿದಾಗಲೆ ನಿಮಗರಿವಾಗುವುದು,ನಿಮ್ಮ ಮನೆಗಾಗಮಿಸಿದ ಅತಿಥಿ ಬೇರಾರೂ ಅಲ್ಲ,ಅವರು ನಿಮ್ಮ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯೆಂದು. ನಿಮ್ಮ ಮಗುವನ್ನು ನಿದ್ದೆಯಿಂದೆಬ್ಬಿಸಿ ಮುಂಜಾನೆ ಬೇಗನೆ ಎದ್ದು ಅಭ್ಯಾಸ ಮಾಡುವ ಬಗ್ಗೆ ಮಗುವಿಗೂ ನಿಮಗೂ ಅವರು ಅರಿವು ಮೂಡಿಸುತ್ತಾರೆ. ಈ ಅಧಿಕಾರಿಯನ್ನು ಬಳಿಕ ಬೀಳ್ಕೊಡಲು ಹೊರಟಾಗ ನಿಮಗೆ ಇನ್ನೊಂದು ಅಚ್ಚರಿ ಕಾದಿರುತ್ತದೆ. ಅವರು ತನ್ನ ಕಚೇರಿಯ ವಾಹನದಲ್ಲಿ ಆಗಮಿಸಿರಬಹುದು ಎಂದು ನೀವು ಭಾವಿಸಿರುತ್ತೀರಿ. ಆದರೆ ಅವರು ತನ್ನದೇ ಸ್ಕೂಟರ್ ಏರಿ ಗಡ ಗಡ ನಡುಗುವ ಚಳಿಯಲ್ಲೇ ನಿಮ್ಮೂರಿನ ಬೇರೊಬ್ಬ ವಿದ್ಯಾರ್ಥಿಯ ಮನೆಗೆ ತೆರಳುತ್ತಾರೆ. ಇನ್ನೇನು ಪರೀಕ್ಷೆಗೆ ಹೆಚ್ಚು ದಿನಗಳು ಉಳಿದಿರುವುದಿಲ್ಲ.ಬಹುತೇಕ ಮಕ್ಕಳಿಗೆ ಮನೆಯಲ್ಲಿ ಅಧ್ಯಯನದ ವಾತಾವರಣವೇ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳ ಹೆತ್ತವರಲ್ಲೂ, ಅಧ್ಯಾಪಕರಲ್ಲೂ ಸಮಾಲೋಚಿಸಿ ಅವರಿಗೆ ಶಾಲೆಯಲ್ಲೇ ರಾತ್ರಿ ಉಳಿದುಕೊಳ್ಳುವ ಹಾಗೂ ಅಭ್ಯಾಸ ಮಾಡುವ ವ್ಯವಸ್ಥೆಯನ್ನೂ ಇದೇ ಶಿಕ್ಷಣಾಧಿಕಾರಿ ಕಲ್ಪಿಸುತ್ತಾರೆ. ದಾನಿಗಳನ್ನು ಸಂಪರ್ಕಿಸಿ ಆ ಮಕ್ಕಳಿಗೆ ಕಾಫಿ, ತಿಂಡಿ,ಊಟದ ವ್ಯವಸ್ಥೆಯೂ ನಡೆಯುತ್ತದೆ.ಮಕ್ಕಳೆಲ್ಲರೂ ಒಂದಿಷ್ಟು ಅಧ್ಯಯನವನ್ನು ಮಾಡಲಾರಂಭಿಸುತ್ತಾರೆ. ಇವರಿಗೆ ಅಧ್ಯಯನದಲ್ಲಿ ಪಾಳಿಯಲ್ಲಿ ಅವರದೇ ಅಧ್ಯಾಪಕರು ನೆರವಾಗುತ್ತಾರೆ.ಇದ್ದಕ್ಕಿಂದ್ದಂತೆ ಒಂದು ರಾತ್ರಿ ಆ ಶಾಲೆಗೆ ಇದೇ ಶಿಕ್ಷಣಾಧಿಕಾರಿ ತನ್ನದೇ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಾರೆ. ಮಕ್ಕಳ ಅಧ್ಯಯನವನ್ನು ಗಮನಿಸುತ್ತಾರೆ. ಅಧ್ಯಾಪಕರೊಂದಿಗೆ ಮಕ್ಕಳ ಕಲಿಕಾ ಪ್ರಗತಿಯ ಕುರಿತು ವಿಚಾರಿಸುತ್ತಾರೆ.ಅವರೊಂದಿಗೇ ಊಟ ಮಾಡಿ ಆ ರಾತ್ರಿ ಶಾಲೆಯಲ್ಲೇ ವಾಸ್ತವ್ಯವಿದ್ದು ಮುಂಜಾನೆಯೆದ್ದು ತನ್ನ ಕಚೇರಿ ಕೆಲಸಕ್ಕೆ ತೆರಳುತ್ತಾರೆ. ಇಂತಹ ವಿನೂತನ ಕಾರ್ಯವೈಖರಿಯ ಅಧಿಕಾರಿಯೇ, ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಕಾರಿಗಳಾದ ಶಶಿಧರ್ ಜಿ.ಎನ್.
ತಮ್ಮ ತಮ್ಮ ಇಲಾಖೆಯ ನೌಕರರಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಟಾರ್ಗೆಟ್ ಹೇರುವುದು, ಸಾಮಾನ್ಯವಾಗಿ ಬಹುತೇಕ ಅಧಿಕಾರಿಗಳ ಕಾರ್ಯವೈಖರಿ. ಆದರೆ ಅದನ್ನು ತಲುಪುವುದು ಹೇಗೆಂದು ಅನೇಕ ವೇಳೆ ಅವರಿಗೂ ಗೊತ್ತಿರುವುದಿಲ್ಲ. ಆದರೆ ಶಶಿಧರ್ ಜಿ.ಎನ್. ನಮಗಿಲ್ಲಿ ಕೊಂಚ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಕಳೆದ ಎರಡು ವರ್ಷಗಳಿಂದೀಚೆಗೆ ಶಿಕ್ಷಕರಿಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಿಷನ್ 95+ ಎಂಬ ಗುರಿ ನಿರ್ಧರಿಸಿದ್ದಾರೆ. ಆದರೆ ಅಲ್ಲಿಗೇ ಅವರು ಸುಮ್ಮನಾಗಿಲ್ಲ. ಈ ಗುರಿ ತಲುಪುವುದು ಹೇಗೆಂದೂ ಹೇಳುತ್ತಾ ಬರುತ್ತಿದ್ದಾರೆ. ತಾಲೂಕಿನ ಪ್ರತೀ ಶಾಲೆಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ, ನಿಧಾನ ಕಲಿಕೆಯ ವಿದ್ಯಾರ್ಥಿಗಳನ್ನು ಶಿಕ್ಷಕರ ನೆರವಿನಿಂದ ಗುರುತಿಸಿ, ಅವರಿಗೆ ಅತೀ ಅಗತ್ಯವಾದ ಆದರೆ ಅಷ್ಟೇ ಸರಳವಾದ ಅವರ ಪಠ್ಯದಲ್ಲಿನ ವಿಷಯಗಳನ್ನು ಸಂಗ್ರಹಿಸಿ ಪರಿಣಿತ ಶಿಕ್ಷಕರ ನೆರವಿನಿಂದ, ಪ್ರತ್ಯೇಕ ಕಲಿಕಾ ಸಾಮಗ್ರಿಯನ್ನೂ ರಚಿಸಿದ್ದಾರೆ. ಎಸೆಸೆಲ್ಸಿ ಪರೀಕ್ಷೆ ಎಷ್ಟೊಂದು ಮಹತ್ವಪೂರ್ಣವೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಲೇ ಬಂದಿದ್ದಾರೆ.ಆದರೆ ಈ ಶಿಕ್ಷಣಾಧಿಕಾರಿ ಮಾತ್ರ ಈ ಪರೀಕ್ಷೆಯಲ್ಲಿ ಯಶಸ್ಸು ಎಷ್ಟೊಂದು ಸುಲಭವೆಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನೂ ಮಾಡುತ್ತಾ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ನ್ಯೂನತೆಗೆ ಅವರೇ ಹೊಣೆಯೆಂದು ಬಹುತೇಕ ಜನರ ಅನಿಸಿಕೆಯಾದರೆ ಶಶಿಧರ್ ಜಿ.ಎನ್. ಇದರಲ್ಲಿ ಸಮಾಜದ ಪಾತ್ರವೂ ಇದೆಯೆಂದು ಅರಿತಿದ್ದಾರೆ. ಆದುದರಿಂದಲೇ ಮಗುವಿನ ಅಧ್ಯಯನದ ಪ್ರಗತಿಯಲ್ಲಿ ಸಮಾಜವನ್ನೂ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ ಮಾತ್ರವಲ್ಲ, ಜನಪ್ರತಿನಿಗಳು, ಸಮಾಜದ ಗಣ್ಯರು ಹಾಗೂ ಪೋಷಕರನ್ನು ಮಕ್ಕಳ ಶೈಕ್ಷಣಿಕ ಪ್ರಗತಿಯ ಪಾಲುದಾರರೆಂದೇ ಪರಿಗಣಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಕೊನೆಯ ಗಂಟೆ ಭಾರಿಸಲಾರಂಭಿಸಿದೆಯೆಂದು ಎಲ್ಲೆಡೆ ಆತಂಕ ಮೂಡುತ್ತಿದ್ದರೆ, ಪುತ್ತೂರಿನ ಬಹುತೇಕ ಸರಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಲು ಈ ಶಿಕ್ಷಣಾಧಿಕಾರಿ ವಿನೂತನ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಬಹುತೇಕ ಸರಕಾರಿ ಶಾಲೆಗಳ ಗೋಡೆಗಳಿಂದು ವರ್ಲಿ ಚಿತ್ರಕಲೆಯಿಂದ ಕಂಗೊಳಿಸುತ್ತಿದೆ. ಖಾಸಗಿ ಶಾಲೆಗಳಲ್ಲಿ ಕಂಡುಬರುವ ಶ್ಷೆಕ್ಷಣಿಕ ಪರಿಸರವನ್ನು ಸರಕಾರಿ ಶಾಲೆಗಳಲ್ಲೂ ನಿರ್ಮಿಸುವಲ್ಲಿ ಶಶಿಧರ್ ಗಣನೀಯ ಯಶಸ್ಸು ಕಂಡಿದ್ದಾರೆ. ಪುತ್ತೂರು ತಾಲೂಕಿನ ಕೆಲವೆಡೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೆ.ಜಿ.ತರಗತಿಗಳು ಅರಂಭಗೊಂಡಿದ್ದು ನಮ್ಮ ಮಕ್ಕಳೂ ಇಂಗ್ಲಿಷ್ ಕಲಿಯಬೇಕೆಂಬ ಹೆತ್ತವರ ಒತ್ತಾಸೆಗೆ ಈ ಶಿಕ್ಷಣಾಧಿಕಾರಿ ದಾರಿ ತೋರಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಆರಂಭಗೊಂಡ ಮಿಷನ್ 95+ ಯೋಜನೆಯ ಯಶಸ್ಸಿನಿಂದ ಪ್ರಭಾವಿತರಾದ ಮೈಸೂರು ಜಿಲ್ಲಾ ಪಂಚಾಯತ್ ಮೈಸೂರಲ್ಲೂ ಇದೇ ಯೋಜನೆಗೆ ಮುಂದಾಗಿದ್ದು ಈ ಶಿಕ್ಷಣಾಧಿಕಾರಿಯೊಂದಿಗೆ ಸಮಾಲೋಚಿಸಿ, "ಮೈಸೂರು, ಗುರಿ ನೂರು" ಎಂಬ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಒಟ್ಟಾರೆಯಾಗಿ ಶೈಕ್ಷಣಿಕ ಸಾಧನೆಯಲ್ಲಿ ಹಿಂದಿಲ್ಲವಾದರೂ ಎಲ್ಲಾ ವರ್ಗಕ್ಕೂ ಈ ಸಾಧನೆಯ ಲ ದೊರಕಿಲ್ಲ. ಹೀಗಾಗಿ ಇಂತಹ ಯೋಜನೆಗಳು ಆವಶ್ಯಕ. ಆದರೆ ಇನ್ನೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಜಿಲ್ಲೆಗಳಲ್ಲಿ ಈ ಶಿಕ್ಷಣಾಧಿಕಾರಿ ಆರಿಸಿಕೊಂಡಿರುವ ಯೋಜನೆಯನ್ನು ಒಂದು ಪೈಲಟ್ ಯೋಜನೆಯಾಗಿ ಇಲಾಖೆಯ ನೆರವಿನೊಂದಿಗೆ ಖಂಡಿತಾ ಆರಿಸಿಕೊಳ್ಳಬಹುದು. ಕೇವಲ ಸಂಬಳಕ್ಕಾಗಿ ದುಡಿದಾಗ ಅದು ನೌಕರಿ ಎನಿಸಿಕೊಳ್ಳುತ್ತದೆ. ಆದರೆ ಸಂಬಳದೊಂದಿಗೆ ಆತ್ಮತೃಪ್ತಿಗಾಗಿ ದುಡಿದಾಗ ಅದೊಂದು ಸೇವೆಯೆನಿಸಿಕೊಳ್ಳುತ್ತದೆ. ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲೊಬ್ಬ ಅಪರೂಪದ ಅಕಾರಿ ಎಂದರೆ ತಪ್ಪಲ್ಲ.

Writer - ಬಿ.ವಿ.ಸೂರ್ಯನಾರಾಯಣ

contributor

Editor - ಬಿ.ವಿ.ಸೂರ್ಯನಾರಾಯಣ

contributor

Similar News