ಬೆಂಗಳೂರು:ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ- ವಿಧಾನಸಭೆಯಲ್ಲಿ ಭಾರೀ ಗದ್ದಲ

Update: 2016-03-31 11:49 GMT

ಬೆಂಗಳೂರು.ಮಾ.31: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಭಾರೀ ಗದ್ದಲ, ಕೋಲಾಹಲ ವಾತಾವರಣ ಸೃಷ್ಟಿಸಿತು. ಈ ಪ್ರಕರಣಕ್ಕೆ ಪಿಯು ಮಂಡಳಿಯ 40 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯ ತಲೆದಂಡವಾಯಿತು. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದರು.

ಸಚಿವ ಕಿಮ್ಮನೆ ರತ್ನಾಕರ ಅವರ ರಾಜೀನಾಮೆಗೆ ಪಟ್ಟುಹಿಡಿದ ಪ್ರತಿಪಕ್ಷ ಬಿಜೆಪಿ ಶಾಸಕರು ಸದನದಲ್ಲಿ ಧರಣಿ ನಡೆಸಿ, ಘೋಷಣೆ ಕೂಗಿದರು. ಇದರ ಪರಿಣಾಮ ಇಡೀ ದಿನದ ಕಲಾಪ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಬಲಿಯಾಯಿತು.

ಧರಣಿ ಪ್ರತಿಭಟನೆ ನಡುವೆ ಪ್ರಕರಣದ ಬಗ್ಗೆ ಉತ್ತರ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪರೀಕ್ಷಾ ವಿಭಾಗದ 40 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತಕ್ಷಣವೇ ಅಮಾತನು ಮಾಡಲಾಗುವುದು. ರಾಸಾಯನ ಶಾಸ್ತ್ರ ವಿಷಯ ಮರು ಪರೀಕ್ಷೆಯನ್ನು ಏಪ್ರಿಲ್ 12 ರಂದು ನಡೆಸಲಾಗುವುದು ಎಂದು ಪ್ರಕಟಿಸಿದರು.

ಮರು ಪರೀಕ್ಷೆಯ ಸಾರಿಗೆ ಇಲಾಖೆಯ ಆಯುಕ್ತ ರಾಮೇಗೌಡರ ಉಸ್ತುವಾರಿಯಲ್ಲಿ ನಡೆಸಲಾಗುವುದು. ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ: ಪಿ.ಸಿ. ಜಾಫರ್ ನೇತೃತ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರನ್ನು ಒಳಗೊಂಡಂತೆ ಮೂವರು ಅಧಿಕಾರಿಗಳ ವೀಕ್ಷಕರ ತಂಡವನ್ನು ರಚಿಸಿ, ಪರೀಕ್ಷಾ ಉಸ್ತುವಾರಿಗಾಗಿ ನಿಯೋಜಿಸಲಾಗುವುದು ಎಂದರು.

ರಸಾಯನ ಶಾಸ್ತ್ರ ವಿಷಯದ ಪರೀಕ್ಷೆ ಮತ್ತು ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯದಲ್ಲಿ ತನಿಖೆಯನ್ನು ತ್ವರಿತಗತಿಯಲ್ಲಿ ಮಾಡಲು, ಸೋರಿಕೆಯ ಮೂಲಗಳನ್ನು ಗುರುತಿಸಲು ಸಿಐಡಿ ಸಂಸ್ಥೆಯ ಡಿಐಡಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಆದರೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಕಿಮ್ಮನೆ ರತ್ನಾಕರ್ ರಾಜೀನಾಮೆ ನೀಡಲೇಬೇಕೆಂದು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಮೊಳಗಿಸಿದರು. ಬಿಜೆಪಿ ಸದಸ್ಯರು ಭಿತ್ತಿ ಫಲಕಗಳನ್ನು ಹಿಡಿದು ಸಭಾಧ್ಯಕ್ಷರ ಮುಂಬಾವಿಗೆ ಆಗಮಿಸಿ ಘೋಷಣೆ ಕೂಗಿದರು.  ರಾಜೀನಾಮೆ ನೀಡಿ–ರಾಜೀನಾಮೆ ನೀಡಿ, ಕಿಮ್ಮನೆ ರತ್ನಾಕರ್ ಸುಮ್ಮನೆ ರಾಜೀನಾಮೆ ನೀಡಿ,  ಕಿಮ್ಮನೆ–ಕಿಮ್ಮನೆ, ಸುಮ್ಮನೆ ಸುಮ್ಮನೆ ಎಂದು ಪ್ರಾಸಬದ್ಧವಾಗಿ ಘೋಷಣೆಗಳನ್ನು ಮೊಳಗಿಸುತ್ತಿದ್ದರು. ಆದರೆ ಕಿಮ್ಮನೆ ರತ್ನಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದರು. ನಂತರ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಲಾಪವನ್ನು ಅನರ್ದಿಷ್ಟ ಅವಧಿಗೆ ಮುಂದೂಡಿದರು.

ಇದಕ್ಕೂ ಮುನ್ನ ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ದ್ವತೀಯ ಪಿಯುಸಿ ಪ್ರಶ್ನೆಗೆ ಬಯಲಾಗಿರುವ ವಿಚಾರ ಪ್ರಸ್ತಾಪಿಸಿ, ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿಷಯದ ಗಾಂಭೀರ್ಯತೆ ಅರಿತು, ಬೇರೆ ಕಲಾಪ ಬದಿಗೊತ್ತಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಚಿವ ಕಿಮ್ಮನೆ ರತ್ನಾಕರ ಅವರೇ ನೇರ ಹೊಣೆ. ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಬಯಲಾಗುತ್ತದೆ ಎಂದರೆ ಆಡಳಿತ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ. ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪಿಯುಸಿ ಮಂಡಳಿಯಲ್ಲಿ ಸುರೇಶ್ ತಂಗಾ ಎನ್ನುವ ಅಧಿಕಾರಿಯಿದ್ದು, ಅವರೇ ಈ ಹಣಗರದ ರೂವಾರಿಯಾಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದರು.

ಈ ಮೊದಲು ಪ್ರಶ್ನೆ ಪತ್ರಿಕೆ ಮೊದಲ ಬಾರಿಗೆ ಬಹಿರಂಗವಾದಾಗ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ತನಿಖೆಯ ಮಧ್ಯಂತರ ವರದಿಯನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ. ಸರ್ಕಾರ ಯಾವುದೇ ಅಧಿಕಾರಿಗಳ ಮೇಲೂ ಕ್ರಮ ಕೈಗೊಂಡಿಲ್ಲ. ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಧನಿಗೂಡಿಸಿದ ಜೆಡಿಎಸ್‌ನ ವೈ.ಸ್.ವಿ.ದತ್ತ ಅವರು, ಈ ಹಿಂದೆ 1962 ರಲ್ಲಿ ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಬಯಲಾದಾಗ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದರು. ಈಗ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಭ್ರಷ್ಟ ವ್ಯವಸ್ಥೆಯಲ್ಲಿ ಸಚಿವರು ಅಸಹಾಯಕರಾದರೆ ಹೇಗೆ?. ಇದು ನಿಜಕ್ಕೂ ಶೋಚನೀಯ. ಶಿಕ್ಷಣ ಸಚಿವರು ರಾಜೀನಾಮೆ ನೀಡುವುದು ಸೂಕ್ತ ಎಂದರು.

ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಸಚಿವರ ಮಾತು ಕೇಳುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಾದ ಇತಿಹಾಸವೇ ಇಲ್ಲ. ಈ ಲೋಪದ ಹೊಣೆಯನ್ನು ಸಚಿವರು ಹೊರಬೇಕು ಎಂದರು.

ಕಾಂಗ್ರೆಸ್‌ನ ಡಾ: ರಫೀಕ್ ಅಹಮದ್, ಈ ಬೆಳವಣಿಗೆ ಪೋಷಕರಿಗೆ ಆತಂಕ ತಂದಿದೆ. ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಂದುವಂತಾಗಿದೆ. ಇದಕ್ಕೆ ಯಾರು ಕಾರಣ ಎನ್ನುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದರು.

ಸದಸ್ಯರ ಟೀಕೆಗಳಿಗೆ ಉತ್ತರ ನೀಡಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಪ್ರಶ್ನೆ ಪತ್ರಿಕೆ ಬಯಲಾಗಿರುವ ಸಂಬಂಧ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ನಿರತರಾಗಿರುವ ಪಿಯು ಮಂಡಳಿಯ ಇಡೀ ಸಿಬ್ಬಂದಿಯನ್ನು ಬದಲಾಯಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವರು ಉತ್ತರದ ಮಧ್ಯೆಯೇ ಎದ್ದುನಿಂತ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷರೇ ಈ ಉತ್ತರ ತೃಪ್ತಿ ತಂದಿದೆಯೇ ನೀವೆ ಹೇಳಿ ಎಂದಾಗ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ, ಮಾತಿನ ಚಕಮಕಿ ನಡೆಯಿತು.

ಸಚಿವ ಕಿಮ್ಮನೆ ರತ್ನಾಕರ 2012ರಲ್ಲಿ ಪ್ರಶ್ನೆ ಪತ್ರಿಕೆ ಬಯಲಾದಾಗ ನೀವು ರಾಜೀನಾಮೆ ನೀಡಿದ್ದೀರಾ ಎಂದು ಕಾಗೇರಿ ಅವರನ್ನು ಪ್ರಶ್ನಿಸಿದರೆ, ಅದಕ್ಕೆ ಕಾಗೇರಿ ನಮ್ಮ ಕಾಲದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಲಿಲ್ಲ ಎಂದರು. ಸಚಿವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಗದ್ದಲ ವಾತಾವರಣ ಸೃಷ್ಟಿಯಾದಾಗ ಕಲಾಪವನ್ನು ಸಭಾಧ್ಯಕ್ಷರು ಅರ್ದಗಂಟೆಗಳ ಕಾಲ ಮುಂದೂಡಿದರು.

ಬಾಕ್ಸ್

ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಮುಖ್ಯಸ್ಥೆ ಸೋನಿಯಾ ನಾರಂಗ್ ಅವರ ಜತೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸುದೀರ್ಘ ಚರ್ಚೆ ನಡೆಸಿದರು. ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದರಲ್ಲದೇ, ಶಂಕಿತರ ವಿವರಗಳನ್ನು ಸಹ ಪಡೆದರು. ತಪ್ಪಿಸ್ಥರನ್ನು ಅಮಾನತುಗೊಳಿಸುವಂತೆಯೂ ಮುಖ್ಯಮಂತ್ರಿ ಹಾಗೂ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ನಿರ್ದೇಶನ ನೀಡಿದರು.

ಮತ್ತೊಂದು ಬಾಕ್ಸ್

ಪ್ರಶ್ನೆಪತ್ರಿಕೆ ಸೋರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ನಿರ್ದೇಶಕರು ಹೊರಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನೂ ಕೂಡಾ ಇದರ ನೈತಿಕ ಜವಾಬ್ದಾರಿ ಹೊರುತ್ತೇನೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಪಿಯುಸಿ ಬೋರ್ಡ್ ನಿರ್ದೇಶಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇಲ್ಲಿನ ಅಧಿಕಾರಿಗಳನ್ನು ಸಂಪೂರ್ಣಬಾಗಿ ಬದಲಿಸುವ ಅವಶ್ಯಕತೆ ಇದೆ. ಇದರ ನೇರ ಜವಾಬ್ದಾರಿಯನ್ನು ಪಿಯುಸಿ ಬೋರ್ಡ್ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಮತ್ತೊಮ್ಮೆ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಮತ್ತೆ ಪ್ರಶ್ನೆ ಪತ್ರಿಕೆ ಸೋರದಂತೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುತ್ತೇವೆ. ಪ್ರಸ್ತುತ ಪ್ರಕರಣವನ್ನು ಕೂಡಾ ಸಿಓಡಿಗೆ ನೀಡಲಾಗುವುದು. ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.

ಬಾಕ್ಸ್

ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸಲಾಗುವುದು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುವುದು. ತಾಳ್ಮೆಯಿಂದ ಇರುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಗುರಿ ಪಡಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಈ ಹಿಂದೆ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತಪ್ಪಾಗಿರುವುದು ನಿಜ. ಆದರೆ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯ ಮಾಡುವುದು ಸರಿಯಲ್ಲ ಎಂದರು.

ನಂತರ ಪ್ರಕರಣದ ಬಗ್ಗೆ ಗೃಹ ಸಚಿವರು, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಪಿಯು ಮಂಡಳಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಬಾಕ್ಸ್

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆ,ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು. ಈ ಸಂಬಂಧ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News